ADVERTISEMENT

ಭೂಸುಧಾರಣಾ ಕಾಯ್ದೆ: ಆಕ್ಷೇಪಣೆಗೆ ಹೈಕೋರ್ಟ್ ಗಡುವು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 3:23 IST
Last Updated 23 ಡಿಸೆಂಬರ್ 2020, 3:23 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಮುಂದಿನ ಎಲ್ಲಾ ಕ್ರಮಗಳೂ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಹೈಕೋರ್ಟ್‌ ಹೇಳಿದೆ.

ತಿದ್ದುಪಡಿ ಪ್ರಶ್ನಿಸಿ ಬೆಂಗಳೂರಿನ ವಕೀಲರಾದ ಗೀತಾ ಮಿಶ್ರಾ, ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸುಗ್ರೀವಾಜ್ಞೆ ಪ್ರಶ್ನಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಜ.5ರವರೆಗೆ ಗಡುವು ನೀಡಿತು.

‘ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಉಭಯ ಸದನಗಳು ಅನುಮೋದಿಸಿವೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು’ ಎಂದು ಸರ್ಕಾರದ ಪರ ವಕೀಲರು ಕೋರಿದರು. ‘ಮಸೂದೆಗೆ ರಾಜ್ಯಪಾಲರು ಇನ್ನೂ ಅನುಮೋದನೆ ನೀಡಿಲ್ಲ. ಆಕ್ಷೇಪಣೆ ಸಲ್ಲಿಸಲು ಸರ್ಕಾರ ವಿಳಂಬ ಮಾಡುತ್ತಿದ್ದು, ಮತ್ತೊಮ್ಮೆ ಕಾಲಾವಕಾಶ ನೀಡಬಾರದು’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಕ್ಕೆ ತಂದರು.

ADVERTISEMENT

‘ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಗಂಭೀರ ವಿಚಾರವಾಗಿರುವ ಕಾರಣ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ಜ.5ರೊಳಗೆ ಆಕ್ಷೇಪಣೆ ಸಲ್ಲಿಸದಿದ್ದರೆ ಮತ್ತೊಮ್ಮೆ ಸಮಯ ನೀಡುವುದಿಲ್ಲ’ ಎಂದು ತಿಳಿಸಿದ ಪೀಠ, ಜ.6ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.