ADVERTISEMENT

ದಲಿತ, ರೈತ ಸಂಘಟನೆಗಳ ಸಹಯೋಗದಲ್ಲಿ ಹೋರಾಟ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 18:00 IST
Last Updated 24 ಜುಲೈ 2020, 18:00 IST

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ, ದಲಿತ ಸಂಘಟನೆಗಳ ಸಹಯೋಗದಲ್ಲಿ ತಳಮಟ್ಟದ ಹೋರಾಟ ರೂಪಿಸಲು ಪ್ರಮುಖರ ಸಭೆ ನಿರ್ಣಯ ಕೈಗೊಂಡಿದೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಗರದಲ್ಲಿ ಶುಕ್ರವಾರ ನಡೆದ ದಲಿತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

‘ಕಾಯ್ದೆ ತಿದ್ದುಪಡಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ನಾಡಿನ ಹೆಸರಾಂತ ಗಾಯಕರಾದ ಜನಾರ್ದನ (ಜನ್ನಿ), ಪಿಚ್ಚಳ್ಳಿ ಶ್ರೀನಿವಾಸ್‌ ಹಾಗೂ ಅಪ್ಪಗೆರೆ ತಿಮ್ಮರಾಜು ಅವರ ನೇತೃತ್ವದಲ್ಲಿ ಕಲಾ ತಂಡ ರಚಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾಯ್ದೆಯ ಅಪಾಯದ ಬಗ್ಗೆ ಅರಿವು ಮೂಡಿಸಬೇಕು. ಇದಕ್ಕಾಗಿ ವಿವಿಧ ಸಂಘಟನೆಗಳ ಪ್ರಮುಖರಿರುವ ಸಮಿತಿ ರಚಿಸಬೇಕು. ಆಗಸ್ಟ್ 15ರೊಳಗೆ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ADVERTISEMENT

‘ತಿದ್ದುಪಡಿಯ ಹಿಂದೆ ಇರುವ ಹುನ್ನಾರದ ಬಗ್ಗೆ ಜನರಿಗೆ ತಿಳಿ ಹೇಳಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತಂಡಗಳನ್ನು ರಚನೆ ಮಾಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಮಾರ್ಗಸೂಚಿ ಅನ್ವಯವೇ ಹೋರಾಟ ನಡೆಯಬೇಕು’ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

‘ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರ ಹಾಗೂ ಇತರ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ವಿಚಾರದಲ್ಲಿಯೂ ಹೋರಾಟ ನಡೆಸಬೇಕು’ ಎಂದು ಸಂಘಟನೆಗಳ ಮುಖಂಡರು ಸಲಹೆ ನೀಡಿದರು.

ಸಿದ್ದರಾಮಯ್ಯ ಮಾತನಾಡಿ, ‘ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಸೇರಿದಂತೆ ರೈತರಲ್ಲದವರು ಯಾರೂ ಬೇಕಾದರೂ ಈಗ ಜಮೀನು ಖರೀದಿಸಬಹುದು’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಡಾ. ಎಚ್.ಸಿ. ಮಹದೇವಪ್ಪ, ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಗುರುಪ್ರಸಾದ್ ಕೆರಗೋಡು, ಬಸವರಾಜ ನಾಯಕ, ಗಾಯಕ ಜನಾರ್ದನ (ಜನ್ನಿ), ಎಂ. ವೆಂಕಟೇಶ್, ಅಣ್ಣಯ್ಯ, ಗಂಗಾಧರ
ಮೂರ್ತಿ, ಮುನಿಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.