ADVERTISEMENT

ಭಾಷಾ ತಾರತಮ್ಯ: ಸುತ್ತೋಲೆ ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 15:43 IST
Last Updated 15 ಜೂನ್ 2022, 15:43 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಪದವಿಪೂರ್ವ ಶಿಕ್ಷಣ ಇಲಾಖೆಯು ಹೊರ ರಾಜ್ಯಗಳ ಪ್ರವಾಸಕ್ಕೆಹಿಂದಿ ಭಾಷೆ ಬಲ್ಲ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ನೀಡಿರುವುದು ಖಂಡನೀಯ. ಇಲಾಖೆಯು ಕೂಡಲೇ ಸುತ್ತೋಲೆಯನ್ನು ವಾಪಸ್ ಪಡೆದು, ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ಇಲಾಖೆಗೆ ಪತ್ರ ಬರೆದಿದ್ದಾರೆ.‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ‘ಒಂದು ಭಾರತ ಶ್ರೇಷ್ಠ ಭಾರತ’ ಕಾರ್ಯಕ್ರಮದಡಿ ಇಲಾಖೆಯು ಮಕ್ಕಳಲ್ಲಿ ಭಾಷಾ ಗೊಂದಲಕ್ಕೆ ಕಾರಣವಾಗುವಂತಹ ಕ್ರಮ ಕೈಗೊಂಡಿದೆ.ಮಕ್ಕಳ ಆಯ್ಕೆಯಲ್ಲಿ ಹಿಂದಿ ಭಾಷೆ ಬಲ್ಲವರಿಗೆ ಮಾತ್ರ ಅವಕಾಶ ಎನ್ನುವುದು ಸರಿಯಲ್ಲ. ಇಲಾಖೆಯ ಈ ನಡೆಯಿಂದ ಕನ್ನಡದ ಮಕ್ಕಳು ಕೇಂದ್ರ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕನ್ನಡ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ. ಕನ್ನಡ ಮಾಧ್ಯಮ ಉಳಿವಿಗೆ ಪರಿಷತ್ತು ಹೋರಾಡುತ್ತಲೇ ಬಂದಿದೆ. ಇತ್ತೀಚಿಗೆ ಕನ್ನಡ ಶಾಲೆಗಳ ಉಳಿವಿಗಾಗಿ ಸಾಹಿತಿ ಎಸ್.ಎಲ್. ಭೈರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಪ್ರಮುಖ ಶಿಕ್ಷಣ ತಜ್ಞರ ದುಂಡು ಮೇಜಿನ ಸಭೆ ನಡೆಸಿ, ಕನ್ನಡ ಶಾಲೆಗಳ ಉಳಿವಿಗಾಗಿ ಸರ್ಕಾರ ಹಾಗೂ ಸಾರ್ವಜನಿಕರು ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸಮ್ಮುಖದಲ್ಲಿ ಚರ್ಚೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಅಧಿಕಾರಿಗಳು ಭಾಷಾ ವಿಷಯದಲ್ಲಿ ಗೊಂದಲ ಸೃಷ್ಟಿ ಮಾಡಬಾರದು.ಬೇಜವಾಬ್ದಾರಿ ತನದಿಂದ ಕೆಲಸ ಮಾಡುವುದು ಸರಿಯಲ್ಲ. ತಕ್ಷಣವೆ ಈ ಗೊಂದಲಕ್ಕೆ ತೆರೆ ಎಳೆದು, ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.