ADVERTISEMENT

ಕಾನೂನು ಶಾಲೆ: ಮೀಸಲಾತಿಗೆ ಬದ್ಧ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 21:45 IST
Last Updated 21 ಫೆಬ್ರುವರಿ 2023, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ನ್ಯಾಷನಲ್ ಲಾ ಸ್ಕೂಲ್ ಆಫ್‌ ಇಂಡಿಯಾ ಯುನಿವರ್ಸಿಟಿ– ಎನ್‌ಎಲ್‌ಎಸ್‌ಐಯು) ರಾಜ್ಯದ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಎಸ್‌. ಸುರೇಶ್‌ ಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇದೇ 24ರಂದು ಈ ವಿಷಯ ಸುಪ್ರೀಂ ಕೋರ್ಟ್ ಮುಂದೆ ಬರಲಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೂಡ ನಮ್ಮ ಬೇಡಿಕೆಗೆ ಪೂರಕ ಭಾವನೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪರ ವಾದಿಸಲು ಖ್ಯಾತ ವಕೀಲ ತುಷಾರ್ ಮೆಹ್ತಾ ಅವರನ್ನು ನೇಮಿಸಲಾಗಿದೆ’ ಎಂದರು.

‘ಕನ್ನಡದ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ನಿಲುವಿಗೆ ಮನ್ನಣೆ ಸಿಗುವ ವಿಶ್ವಾಸವಿದೆ’ ಎಂದೂ ಸಚಿವರು ಹೇಳಿದರು.

ADVERTISEMENT

‘ಕರ್ನಾಟಕದ ವಿದ್ಯಾರ್ಥಿಗಳಿಗೆ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಶೇ 25ರಷ್ಟು ಮೀಸಲಾತಿ ನೀಡಬೇಕು ಎಂಬ ಕಾಯ್ದೆ ರೂಪಿಸಲಾಗಿದೆ. ಆದರೆ, ಆಡಳಿತ ಮಂಡಳಿ ಕಳೆದೆರಡು ವರ್ಷಗಳಿಂದ ಅದನ್ನು ಪಾಲಿಸುತ್ತಿಲ್ಲ’ ಎಂದು ಸುರೇಶ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ನಾವು ಜಾಗ ನೀಡಿ ಈ ಕಾಲೇಜು ಸ್ಥಾಪಿಸಿದ್ದೇವೆ. ರಾಜ್ಯದ ಈ ಸೌಜನ್ಯಕ್ಕೆ ಪ್ರತಿಯಾಗಿ ನಮ್ಮ ಮಕ್ಕಳಿಗೆ ಸ್ಥಾನ ನೀಡುವಿಕೆಯಲ್ಲಿ ನಿಗದಿತ ಮೀಸಲಾತಿ ಅನುಸರಿಸದೇ ಇದ್ದರೆ ಹೇಗೆ. ಬೇರೆ ರಾಜ್ಯಗಳಲ್ಲಿನ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಹೀಗೆಯೇ ನಡೆದುಕೊಳ್ಳುತ್ತವೆಯೇ. ಕರ್ನಾಟಕದಲ್ಲಿ ಮಾತ್ರ ಏಕೆ ಹೀಗೆ’ ಎಂದು ಪ್ರಶ್ನಿಸಿದರು.

‘ಈ ಸಂಸ್ಥೆಗೆ 23 ಎಕರೆ ಜಾಗ ಹಾಗೂ ₹ 22 ಕೋಟಿ ಅನುದಾನವನ್ನು ಕರ್ನಾಟಕ ಸರ್ಕಾರ ನೀಡಿದೆ. ಆದರೆ, ನಮ್ಮ ಮಕ್ಕಳಿಗೆ ಇಲ್ಲಿ ಸೀಟು ನೀಡುತ್ತಿಲ್ಲ’ ಎಂದು ವಿವರಿಸಿದರು.

ಸುರೇಶ್‌ ಕುಮಾರ್ ಮಾತಿಗೆ ಧ್ವನಿಗೂಡಿಸಿದ ಬಿಜೆಪಿಯ ಕೆ.ಜಿ. ಬೋಪಯ್ಯ, ಪಿ. ರಾಜೀವ್‌, ‘ಕರ್ನಾಟಕ ಸರ್ಕಾರದ ನಿಯಂತ್ರಣವೇ ನಮ್ಮ ಮೇಲಿಲ್ಲ ಎನ್ನುವಂತೆ ನ್ಯಾಷನಲ್ ಲಾ ಸ್ಕೂಲ್ ವರ್ತನೆಯಿದೆ’ ಎಂದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ‘ಈ ವಿಷಯ ಸೂಕ್ಷ್ಮವಾಗಿದೆ. ಶಾಲೆಯ ಆಡಳಿತ ಮಂಡಳಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
ಗಳೇ ಅಧ್ಯಕ್ಷರಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಾನೂನುಬದ್ಧವಾಗಿ ಸರ್ಕಾರ ಹೆಜ್ಜೆಯಿಟ್ಟು ಕನ್ನಡದ ಮಕ್ಕಳಿಗೆ ಸೀಟು ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.