ADVERTISEMENT

ಸವದಿ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 18:50 IST
Last Updated 28 ಅಕ್ಟೋಬರ್ 2019, 18:50 IST
ಲಕ್ಷಣ ಸವದಿ
ಲಕ್ಷಣ ಸವದಿ   

ಬೆಂಗಳೂರು: ಉಪ ಮುಖ್ಯಮಂತ್ರಿ ಲಕ್ಷಣ ಸವದಿ ವಿರುದ್ಧ ಪಕ್ಷದ ಶಾಸಕರು ಮತ್ತು ಕೆಲವು ಸಚಿವರ ಅಸಮಾಧಾನ ಹೆಚ್ಚಾಗುತ್ತಿರುವುದು ಪಕ್ಷದ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.

ಉಪ ಚುನಾವಣೆ ಬಳಿಕ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವುದೂ ಕಷ್ಟ ಎಂಬ ಚರ್ಚೆಯೂ ಪಕ್ಷದ ವಲಯದಲ್ಲಿ ಆರಂಭವಾಗಿದೆ.

ಯಡಿಯೂರಪ್ಪ ಅವರಿಗೆ ಪರ್ಯಾಯ ಲಿಂಗಾಯತ ಎಂದು ಬಿಂಬಿಸಿ, ಬೆಳೆಸುವ ಪ್ರಯತ್ನದ ಬಗ್ಗೆ ಆ ಸಮುದಾಯಕ್ಕೆ ಸೇರಿದ ಹಲವು ನಾಯಕರಲ್ಲಿ ಅತೃಪ್ತಿ ಉಂಟು ಮಾಡಿದೆ. ಸಾಕಷ್ಟು ಅರ್ಹ ಪ್ರಭಾವಿ ಶಾಸಕರು ಮತ್ತು ಮಂತ್ರಿಗಳಿದ್ದರೂ, ಚುನಾವಣೆಯಲ್ಲಿ ಸೋತಿದ್ದ ಸವದಿಗೆ ಮಣೆ ಹಾಕುವ ಅಗತ್ಯವೇನಿತ್ತು ಎಂಬ ಚರ್ಚೆಯೂ ನಡೆದಿದೆ.

ADVERTISEMENT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಚುನಾವಣಾ ಉಸ್ತುವಾರಿ ಸವದಿಗೆ ನೀಡಲಾಗಿತ್ತು. ಅಲ್ಲಿನ ಲಿಂಗಾಯತರನ್ನು ಸೆಳೆಯುವುದು ಬಿಜೆಪಿ ವರಿಷ್ಠರ ಉದ್ದೇಶವಾಗಿತ್ತು. ಆದರೆ ಅವರು ಆ ಕೆಲಸದಲ್ಲಿ ಸಫಲರಾಗಲಿಲ್ಲ. ಒಂದು ವೇಳೆ ಯಶಸ್ವಿಯಾಗಿದ್ದರೆ, ಸವದಿಗೆ ಹೆಚ್ಚಿನ ಮನ್ನಣೆ ಸಿಗುತ್ತಿತ್ತು. ಈಗ ಎಲ್ಲವೂ ತಲೆ ಕೆಳಗಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಥಣಿ ಕ್ಷೇತ್ರದಲ್ಲಿ ಅನರ್ಹ ಶಾಸಕ ಮಹೇಶ್‌ ಕುಮಟಳ್ಳಿ ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಅವರಿಗೆ ಭರವಸೆ ನೀಡಿ ಪಕ್ಷಕ್ಕೆ ಕರೆ ತಂದಿರುವುದರಿಂದ, ಅವರಿಗೇ ಟಿಕೆಟ್‌ ನೀಡಬೇಕಾಗಿದೆ. ಸವದಿ ಕೂಡ ಟಿಕೆಟ್‌ಗೆ ಪಟ್ಟು ಹಿಡಿದಿರುವುದು ವರಿಷ್ಠರಿಗೆ ತಲೆ ನೋವಾಗಿದೆ. ಈ ಮಧ್ಯೆ ಅನರ್ಹರಿಗೆ ಟಿಕೆಟ್‌ ನೀಡುವ ಸಂಬಂಧ ಸವದಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಯಡಿಯೂರಪ್ಪ ನಿಷ್ಠ ಶಾಸಕರನ್ನು ಕೆರಳಿಸಲಾರಂಭಿಸಿದೆ.

ವಿಧಾನಪರಿಷತ್ತಿನಲ್ಲಿ ಅವರಿಗಾಗಿ ಸ್ಥಾನ ಬಿಟ್ಟುಕೊಡಲು ಪಕ್ಷದ ಯಾವುದೇ ಸದಸ್ಯರೂ ತಯಾರಿಲ್ಲ. ಮತ್ತೊಬ್ಬರಿಗಾಗಿ ತಮ್ಮ ರಾಜಕೀಯ ಭವಿಷ್ಯದ ಮೇಲೆ ಕಲ್ಲು ಹಾಕಿಕೊಳ್ಳುವ ಅಗತ್ಯವೇನಿದೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರದು ಸವದಿ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.