
ವಿಧಾನಸೌಧ
ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶ ಹೊರತುಪಡಿಸಿದ, ಪ್ರದೇಶಗಳಲ್ಲಿ ಬಡಾವಣೆ ಅಭಿವೃದ್ಧಿಗೆ ನಿಯಮಗಳನ್ನು ರೂಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಗ್ರಾಮ ಪಂಚಾಯಿತಿಯ ಸ್ಥಳೀಯ ಯೋಜನಾ ಪ್ರದೇಶದ ಹೊರಗೆ ಇರುವ ಹಾಗೂ ಭೂಪರಿವರ್ತನೆಗೆ ಒಳಗಾದ ಜಮೀನುಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪೂರ್ವಾನುಮೋದನೆ ಪಡೆದ ಈ ಬಡಾವಣೆಗಳಲ್ಲಿನ ನಿವೇಶನಗಳಿಗೆ ಗ್ರಾಮ ಪಂಚಾಯಿತಿಯೇ ಖಾತೆ ಮಾಡಿಕೊಡಲಿದೆ. ಭೂಪರಿವರ್ತನೆ ಇಲ್ಲದೆ ಅಭಿವೃದ್ಧಿಪಡಿಸಲಾದ ಬಡಾವಣೆಗಳಿಗೆ ಇದು ಅನ್ವಯವಾಗುವುದಿಲ್ಲ.
ಬಡಾವಣೆ ಅಭಿವೃದ್ಧಿಪಡಿಸುವುದಕ್ಕೂ ಮುನ್ನ ಸಂಬಂಧಿತ, ಪರಿವರ್ತಿತ ಜಮೀನಿನ ಮಾಲೀಕ ಬಡಾವಣೆಯ ವಿನ್ಯಾಸವನ್ನು ರಚಿಸಬೇಕು. ಬಡಾವಣೆಯಲ್ಲಿ ಇರಲಿರುವ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ, ಒಳಚರಂಡಿ, ನೀರಿನ ಕೊಳವೆ ಮಾರ್ಗ, ತ್ಯಾಜ್ಯ ನೀರು ಸಂಸ್ಕರಣ ಘಟಕ, ವಿದ್ಯುತ್ ಜಾಲಗಳಿಗೆ ಸಂಬಂಧಿತ ಇಲಾಖೆ ಅಥವಾ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ.
ಈ ಎಲ್ಲ ದಾಖಲೆಗಳನ್ನು ಒಳಗೊಂಡ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ, ಬಡಾವಣೆ ಅಭಿವೃದ್ಧಿಪಡಿಸಲು ಅನುಮತಿ ಪಡೆಯಬೇಕು. ಹೀಗೆ ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿನ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ– ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳನ್ನು ಹಕ್ಕು ಪರಿತ್ಯಾಜನಾ ಪತ್ರದ ಮೂಲಕ ಗ್ರಾಮ ಪಂಚಾಯಿತಿಗೆ ಬಿಟ್ಟುಕೊಡಬೇಕು. ಹೀಗೆ ಬಿಟ್ಟು ಕೊಟ್ಟ ನಂತರ ಅವುಗಳ ನಿರ್ವಹಣೆಯ ಹೊಣೆಗಾರಿಕೆಯು ಸಂಬಂಧಿತ ಗ್ರಾಮ ಪಂಚಾಯಿತಿಯದ್ದಾಗಿರಲಿದೆ ಎಂದು ವಿವರಿಸಿದೆ.
ಇನ್ನು ಬಡಾವಣೆಯ ಮೂಲೆ ನಿವೇಶನಗಳು, ನಾಗರಿಕ ಬಳಕೆ (ಸಿ.ಎ) ನಿವೇಶನಗಳು ಮತ್ತು ಮಧ್ಯಂತರ ನಿವೇಶನಗಳನ್ನು ಅಡಮಾನ ಒಪ್ಪಂದದ ಅಡಿಯಲ್ಲಿ ಗ್ರಾಮ ಪಂಚಾಯಿತಿಗೆ ಒಪ್ಪಿಸಬೇಕು. ನಿಗದಿತ ಅವಧಿಯಲ್ಲಿ ಬಡಾವಣೆಯನ್ನು ಅಭಿವೃದ್ಧಿಪಡಿಸಿದರೆ, ಅಡಮಾನ ಒಪ್ಪಂದವನ್ನು ರದ್ದುಪಡಿಸಬೇಕು ಮತ್ತು ನಿವೇಶನಗಳನ್ನು ಬಡಾವಣೆ ಅಭಿವೃದ್ಧಿದಾರರಿಗೆ ಹಿಂತಿರುಗಿಸಬೇಕು ಎಂದು ಸೂಚಿಸಿದೆ.
ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿರುವ ಮೂಲಭೂತ ಸೌಕರ್ಯಗಳು ಯಾವುದೇ ದೋಷದಿಂದ ಕೂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಅಭಿವೃದ್ಧಿದಾರರು ಗ್ರಾಮ ಪಂಚಾಯಿತಿಗೆ ಖಾತರಿ ಒದಗಿಸಬೇಕು. ಮೂಲ ಸೌಕರ್ಯ ಅಭಿವೃದ್ಧಿಗೆ ತಗುಲಿರುವ ಒಟ್ಟು ವೆಚ್ಚದ ಶೇ 10ರಷ್ಟನ್ನು ಬ್ಯಾಂಕ್ ಭದ್ರತೆ ರೂಪದಲ್ಲಿ, ಒಂದು ವರ್ಷಕ್ಕೆ ಗ್ರಾಮ ಪಂಚಾಯಿತಿ ಎಂಜಿನಿಯರಿಂಗ್ ಇಲಾಖೆಯಲ್ಲಿ ಇರಿಸಬೇಕು. ಒಂದು ವರ್ಷದ ನಂತರ ಅದನ್ನು ವಾಪಸ್ ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿತ ಇಲಾಖೆ/ಪ್ರಾಧಿಕಾರ ಗಳಿಂದ ವಿನ್ಯಾಸ ಅನುಮೋದನೆ ಪಡೆದ ನಂತರವಷ್ಟೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ಅವಕಾಶ
ಗ್ರಾಮೀಣಾಭಿವೃದ್ಧಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಎಸ್ಕಾಂಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ
ಮೂಲಭೂತ ಸೌಕರ್ಯಗಳ ಅಭಿವೃದ್ಧಿ ವೇಳೆ ಸಂಬಂಧಿತ ಇಲಾಖೆ/ಪ್ರಾಧಿಕಾರ/ವಿಭಾಗಗಳಿಗೆ ಒಟ್ಟು ವೆಚ್ಚದ ಶೇ5 ರಿಂದ ಶೇ10 ರವರೆಗೆ ಮೇಲ್ವಿಚಾರಣಾ ಶುಲ್ಕ ಪಾವತಿಸಬೇಕು
ಬಡಾವಣೆಗಳಲ್ಲಿನ ರಸ್ತೆ, ಉದ್ಯಾನ, ಸಾರ್ವಜನಿಕ ಬಳಕೆ ಪ್ರದೇಶ, ನಾಗರಿಕ ಬಳಕೆ ನಿವೇಶನಗಳನ್ನು ಗ್ರಾಮ ಪಂಚಾಯಿತಿಗೆ ಬಿಟ್ಟುಕೊಡುವುದು ಕಡ್ಡಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.