ADVERTISEMENT

ಇಂದು ಸಂಜೆ ವಿರೋಧ ಪಕ್ಷದ ನಾಯಕನ ಆಯ್ಕೆ: ಮೂವರ ಹೆಸರು ಮುನ್ನೆಲೆಗೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 15:45 IST
Last Updated 16 ನವೆಂಬರ್ 2023, 15:45 IST
   

ಬೆಂಗಳೂರು: ವಿರೋಧಪಕ್ಷದ ನಾಯಕ ಸ್ಥಾನದ ಆಯ್ಕೆ ಶುಕ್ರವಾರ ನಡೆಯಲಿದ್ದು, ಶಾಸಕರಾದ ವಿ.ಸುನಿಲ್‌ಕುಮಾರ್, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಆರ್‌.ಅಶೋಕ ಅವರ ಹೆಸರು ಮುನ್ನೆಲೆಗೆ ಬಂದಿದೆ.

ಸಂಜೆ 6 ಕ್ಕೆ ಐಟಿಸಿ ಗಾರ್ಡೇನಿಯಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಗಾಗಿ ಕೇಂದ್ರದಿಂದ ಇಬ್ಬರು ವೀಕ್ಷಕರು ಬರಲಿದ್ದು, ಯಾರೆಲ್ಲ ಬರುತ್ತಾರೆ ಮತ್ತು ಯಾವ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬ ಸ್ಪಷ್ಟತೆ ಸಿಕ್ಕಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಪಕ್ಷದ ಅಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಿರುವುದರಿಂದ ವಿರೋಧಪಕ್ಷದ ನಾಯಕ ಸ್ಥಾನವನ್ನು ಹಿಂದುಳಿದ ಸಮುದಾಯಕ್ಕೆ ನೀಡುವುದಾದರೆ ಸುನಿಲ್‌ಕುಮಾರ್ ಅವರಿಗೂ, ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕುವುದಾದರೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಹೊಣೆಗಾರಿಕೆ ನೀಡಬಹುದು. ಅಶೋಕ ಅವರು ಹಿರಿತನದ ಆಧಾರದಲ್ಲಿ ವಿರೋಧಪಕ್ಷದ ನಾಯಕನಾಗಬೇಕು ಎಂಬ ಉತ್ಸಾಹದಲ್ಲಿದ್ದಾರೆ. ಆದರೆ, ಇವರಿಗೆ ಎದುರಾಳಿ ನಾಯಕರನ್ನು ಮಾತಿನಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ. ಅಂತಿಮ ಕ್ಷಣದಲ್ಲಿ ಹಿರಿತನದ ಆಧಾರದಲ್ಲಿ ಅಶೋಕ ಅವರಿಗೆ ಪಟ್ಟ ಕಟ್ಟಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಮಧ್ಯೆ ಸುದ್ದಿಗಾರರ ಜತೆ ಮಾತನಾಡಿದ ಆರ್‌.ಅಶೋಕ, ‘ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೇನೆ. ನಾಳೆ ಹೆಸರು ಪ್ರಕಟವಾಗಲಿದೆ. ನಾನೂ ಸೇರಿ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದೇವೆ. ಪಕ್ಷ ಯಾರಿಗೆ ಅವಕಾಶ ನೀಡಿದರೂ ಸ್ವಾಗತಿಸುತ್ತೇನೆ‘ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.