ADVERTISEMENT

ಪರಿಷತ್ತಿನ ಪ್ರಶ್ನೋತ್ತರ | ಸರ್ಕಾರಿ ಶಾಲೆ ಅಭಿವೃದ್ಧಿ ಹೊಣೆ ಯಾರದ್ದು...

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 0:24 IST
Last Updated 20 ಮಾರ್ಚ್ 2025, 0:24 IST
   

ಬೆಂಗಳೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ಹೊಣೆ ಸರ್ಕಾರದ್ದು ಮಾತ್ರವೇ? ಈ ಪ್ರಶ್ನೆ ಮುಂದಿಟ್ಟು ವಿಧಾನಪರಿಷತ್ತಿನಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆ ನಡೆಯಿತು.

ಬಜೆಟ್‌ ಮೇಲಿನ ಚರ್ಚೆ ಆರಂಭಿಸಿದ ಜೆಡಿಎಸ್‌ ಸದಸ್ಯ ಎಸ್‌.ಎಲ್‌ ಬೋಜೇಗೌಡ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆ ವೇಳೆ ಶಿಕ್ಷಣಕ್ಕಾಗಿ ಭರಪೂರ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಅದು ಸ್ವಾಗತಾರ್ಹವೇ. ಆದರೆ, ಅವು ಅನುಷ್ಠಾನಕ್ಕೆ ಬರುವುದಿಲ್ಲ. ಏಕೆಂದರೆ ಅಗತ್ಯ ಅನುದಾನವನ್ನೇ ತೆಗೆದಿರಿಸಿಲ್ಲ’ ಎಂದರು.

‘ಸರ್ಕಾರಿ ಶಾಲಾ–ಕಾಲೇಜು ವಿಶ್ವವಿದ್ಯಾಲಯಗಳಿಗೆ ಸರಿಯಾದ ಕಟ್ಟಡಗಳಿಲ್ಲ. ಬಹುತೇಕ ಕಡೆ ಶೇ50ಕ್ಕೂ ಹೆಚ್ಚಿನ ಬೋಧಕ ಸಿಬ್ಬಂದಿಯ ಕೊರತೆ ಇದೆ. ಸರ್ಕಾರ ರಸ್ತೆ ಕಾಮಗಾರಿಗಳನ್ನು ಐದು ವರ್ಷ ನಿಲ್ಲಿಸಲಿ. ಆದರೆ ಶಾಲೆಗಳನ್ನು ಅಭಿವೃದ್ಧಿಪಡಿಸಲಿ’ ಎಂದರು.

ADVERTISEMENT

ಅವರ ಮಾತನ್ನು ತಡೆದ ಉಪಸಭಾಧ್ಯಕ್ಷ ಎಂ.ಕೆ.ಪ್ರಾಣೇಶ್‌, ‘ಬೋಜೇಗೌಡರೇ, ನಿಮ್ಮ ಅನುದಾನವನ್ನು ಬಳಸಿಕೊಂಡು ನಿಮ್ಮ ಕ್ಷೇತ್ರದ ಯಾವುದಾದರೂ ಸರ್ಕಾರಿ ಶಾಲೆಯನ್ನು ಹೈಟೆಕ್‌ ಮಾಡಬಹುದಲ್ಲವೇ. ಎಲ್ಲವನ್ನೂ ಸರ್ಕಾರದ ಮೇಲೆಯೇ ಹೊರಿಸಿದರೆ, ಚುನಾಯಿತ ಜನಪ್ರತಿನಿಧಿಗಳ ಜವಾಬ್ದಾರಿಯೇನು’ ಎಂದರು.

ವಿರೋಧ ಪಕ್ಷಗಳ ಸಾಲಿನಲ್ಲಿ ಹಲವು ಸದಸ್ಯರು ಎದ್ದು, ‘ತಮ್ಮ ತಮ್ಮ ಸ್ವಂತ ಖಾಸಗಿ ಶಾಲೆಗಳನ್ನು ಹೊಂದಿರುವವರು, ಸರ್ಕಾರಿ ಶಾಲೆಗಳನ್ನು ಏಕೆ ಅಭಿವೃದ್ಧಿಪಡಿಸುತ್ತಾರೆ’ ಎಂದರು.

ಬೋಜೇಗೌಡ, ‘ಇದೆಲ್ಲವನ್ನೂ ಸರ್ಕಾರವೇ ಮಾಡಲು ಅವಕಾಶವಿರುವ ಕಾರಣಕ್ಕೆ ವಿಷಯ ಪ್ರಸ್ತಾಪಿಸುತ್ತಿದ್ದೇನೆ’ ಎಂದರು.

ಉಪಸಭಾಧ್ಯಕ್ಷರು, ‘ಎನ್‌.ರವಿಕುಮಾರ್ ಅವರು, ನಾನು ನಮ್ಮ ಕ್ಷೇತ್ರಗಳಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿದ್ದೇವೆ. ಅಂತಹ ಒಂದು ನೈತಿಕತೆಯನ್ನು ಚುನಾಯಿತ ಪ್ರತಿನಿಧಿಗಳೂ ಉಳಿಸಿಕೊಳ್ಳಬೇಕು’ ಎಂದರು.

ವಿದ್ಯಾರ್ಥಿಗಳಿಗೆ ತಲಾ ₹57 ಸಾವಿರ ಖರ್ಚು!’

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸರ್ಕಾರಿ ಶಾಲಾ ವಿದ್ಯಾರ್ಥಿಯ ಮೇಲೆ ವರ್ಷಕ್ಕೆ ₹57 ಸಾವಿರ ಖರ್ಚು ಮಾಡಿದರೆ, ಕೇಂದ್ರ ಸರ್ಕಾರದ ಕೇಂದ್ರೀಯ ವಿದ್ಯಾಲಯ ಪ್ರತಿ ವಿದ್ಯಾರ್ಥಿ ಮೇಲೆ ₹25 ಸಾವಿರ ಖರ್ಚು ಮಾಡುತ್ತದೆ. ಆದರೆ, ಶಿಕ್ಷಣದ ಗುಣಮಟ್ಟದಲ್ಲಿ ಅಜಗಜಾಂತರವಿದೆ ಎಂದು ಬಿಜೆಪಿಯ ಧೀರಜ್ ಮುನಿರಾಜು ವಿಧಾನಸಭೆಯಲ್ಲಿ ಹೇಳಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೌಢಶಾಲೆ ಮತ್ತು ಪಿಯುಸಿ ಸೇರಿ ಶಾಲಾ ಶಿಕ್ಷಣಕ್ಕೆ ₹33,000 ಕೋಟಿ ನಿಗದಿ ಮಾಡಲಾಗಿದೆ. ಶಿಕ್ಷಕರ ಮತ್ತು ಸಿಬ್ಬಂದಿ ವೇತನ, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ವೆಚ್ಚ ಮತ್ತು ಇತರ ಖರ್ಚು ಇದರಲ್ಲಿ ಒಳಗೊಂಡಿದೆ. ಇದನ್ನು ಭಾಗಿಸಿದಾಗ ಪ್ರತಿ ವಿದ್ಯಾರ್ಥಿ ಮೇಲೆ ₹57 ಸಾವಿರ ಖರ್ಚು ಮಾಡಿದಂತಾ ಗುತ್ತಿದೆ ಎಂದರು. ಇಷ್ಟೆಲ್ಲಾ ಖರ್ಚು ಮಾಡಿದರೂ, ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ತೇರ್ಗಡೆ ಹೊಂದುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಈಗ ಶೇ 58ಕ್ಕೂ ಕಡಿಮೆ ಇದೆ. ವಿದ್ಯಾರ್ಥಿಗಳ ಗುಣಮಟ್ಟವೂ ಅಷ್ಟಕಷ್ಟೆ ಎಂದರು.

ಪಾಠ ಮಾಡಬೇಕಾದ ಶಿಕ್ಷಕರನ್ನು ಮೊಟ್ಟೆ ಖರೀದಿಸಲು, ಬಿಸಿಯೂಟ ತಯಾರಿಸಲು, ಶೌಚಾಲಯ ತೊಳೆಯುವ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಶೌಚಾಲಯ ತೊಳೆಯಲು ಪ್ರತ್ಯೇಕ ಸಿಬ್ಬಂದಿ ನೇಮಿಸಿಲ್ಲ. ಹೀಗಾಗಿ ಶಾಲಾ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದು ಅಭಿಪ್ರಾಯಪಟ್ಟರು.

‘ಎಂಎಸ್‌ಪಿ ಅಡಿ ಪ್ರತಿ ರೈತರಿಂದ 20 ಕ್ವಿಂಟಾಲ್‌ ರಾಗಿ ಖರೀದಿಸಲಾ ಗುತ್ತಿದೆ. ಅತಿ ಹೆಚ್ಚು ರಾಗಿ ಬೆಳೆಯುವ ಪ್ರದೇಶ ನಮ್ಮದು. ಆದ್ದರಿಂದ, ಹೆಚ್ಚು ರಾಗಿ ಖರೀದಿಸಬೇಕು ಎಂದು ಧೀರಜ್ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ಕೇಂದ್ರಕ್ಕೆ ಈ ಸಂಬಂಧ ಮನವಿ ಮಾಡಿದ್ದು, ಆ ಪ್ರಮಾಣವನ್ನು 50 ಕ್ವಿಂಟಾಲ್‌ಗೆ ಹೆಚ್ಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.