ಬೆಂಗಳೂರು: ‘ಉಪನೋಂದಣಿ ಕಚೇರಿಯಲ್ಲಿ ಸದಾ ಸರ್ವರ್ ಸಮಸ್ಯೆ ಇದೆ ಎನ್ನುತ್ತಾರೆ. ಆದರೆ ಅಧಿಕಾರಿಗಳಿಗೆ ಪರಿಚಯವಿದ್ದರೆ ಸರ್ವರ್ ಕೈಕೊಡುವುದೇ ಇಲ್ಲ. ನೋಂದಣಿಯೂ ತಕ್ಷಣವೇ ಆಗುತ್ತದೆ’ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಗುರುವಾರ ಮಂಡಿಸಲಾದ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ ಮೇಲಿನ ಚರ್ಚೆ ವೇಳೆ ಹಲವು ಸದಸ್ಯರು, ಸರ್ವರ್ ಸಮಸ್ಯೆ ವಿಪರೀತವಾಗಿದೆ. ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಸರ್ವರ್ ಹ್ಯಾಕ್ ಮಾಡಿದ್ದರಿಂದ ಈ ಸಮಸ್ಯೆ ಎದುರಾಗಿತ್ತು. ಅದನ್ನು ಸರಿಪಡಿಸಲಾಗುತ್ತಿದೆ’ ಎಂದರು. ಆಗ ರವಿಕುಮಾರ್ ಅವರು, ‘ಪರಿಚಯವಿದ್ದರೆ ಸರ್ವರ್ ಡೌನ್ ಆಗುವುದಿಲ್ಲ’ ಎಂದು ಆರೋಪಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ, ‘ಪರಿಚಯದ ಮೇಲೆ ಕೆಲಸ ಆಗುವುದು ಎಲ್ಲ ಕಾಲದಲ್ಲೂ ಇತ್ತು’ ಎಂದರು. ಸಚಿವ ಕೃಷ್ಣ ಬೈರೇಗೌಡ, ‘ಇದನ್ನು ನಾನು ಅಲ್ಲಗೆಳೆಯುವುದಿಲ್ಲ. ನನ್ನ ಗಮನಕ್ಕೂ ಇದು ಬಂದಿದೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದರು.
‘ಕರ್ನಾಟಕ ಸ್ಟಾಂಪು (ತಿದ್ದುಪಡಿ) ಮಸೂದೆ’ ಮೇಲಿನ ಚರ್ಚೆಯ ವೇಳೆ ಜೆಡಿಎಸ್‌ನ ಕೆ.ವಿವೇಕಾನಂದ, ‘ಇ–ಖಾತಾ ನೀಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ₹25,000 ಲಂಚ ನಿಗದಿ ಮಾಡಿದ್ದಾರೆ. ಅದನ್ನು ನೀಡಿದರಷ್ಟೇ ಕೆಲಸ ಆಗುತ್ತದೆ’ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ‘ಈ ಬಗ್ಗೆ ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.