ADVERTISEMENT

ಬಿಜೆಪಿ, ಆರೆಸ್ಸೆಸ್ ಟೀಕಿಸಿದ್ದ ಸಿದ್ದರಾಮಯ್ಯಗೆ ಸುರೇಶ್ ಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 4:45 IST
Last Updated 6 ಏಪ್ರಿಲ್ 2022, 4:45 IST
   

ಬೆಂಗಳೂರು: ದೇಶದಲ್ಲಿ ಮೇಲು- ಕೀಳೆಂಬ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಹುಟ್ಟು ಹಾಕಿದ್ದು ಬಿಜೆಪಿ ಹಾಗೂ ಆರೆಸ್ಸೆಸ್ ಎಂದು ಟೀಕಿಸಿದ್ದ ಪ್ರತಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಮಂಗಳವಾರ, ಕಾಂಗ್ರೆಸ್ ವತಿಯಿಂದ ನಡೆದ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು, ದೇಶದಲ್ಲಿ ಮೇಲು - ಕೀಳೆಂಬ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಹುಟ್ಟು ಹಾಕಿದ್ದು ಬಿಜೆಪಿ ಹಾಗೂ ಆರೆಸ್ಸೆಸ್. ಈ ದೇಶಕ್ಕೆ ಆಹಾರ ಭದ್ರತೆ ಕೊಟ್ಟಿದ್ದು, ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾದೇಶ ಉದಯಕ್ಕೆ ಕಾರಣರಾಗಿದ್ದು ಇಂದಿರಾಗಾಂಧಿ ಹಾಗೂ ಬಾಬು ಜಗಜೀವನ್ ರಾಮ್. ಮೋದಿ ಅಥವಾ ಬೊಮ್ಮಾಯಿ ಕೊಟ್ಟಿದ್ದಲ್ಲ ಎಂದು ಹೇಳಿದ್ದರು.

ಮುಂದುವರಿದು, ಹಾಗಾದರೆ, ದೇಶಕ್ಕೆ ಬಿಜೆಪಿ ಕೊಡುಗೆ ಏನು? ಮೋದಿ ಎಂದಾದರೂ ಜೈಲಿಗೆ ಹೋಗಿದ್ರಾ? ಆಸ್ತಿಪಾಸ್ತಿ ಕಳೆದುಕೊಂಡಿದ್ರಾ? ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಅವರಿಗೆ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.

ADVERTISEMENT

ಸಿದ್ದರಾಮಯ್ಯನವರ ಟೀಕೆಗಳಿಗೆ ಸುರೇಶ್ ಕುಮಾರ್ ಪ್ರಶ್ನೆ

1) ಬಾಬು ಜಗಜೀವನ್ ರಾಮ್ ಇದ್ದ ಕಾಂಗ್ರೆಸ್ಸಿನಲ್ಲಿ ನೀವು ಇದ್ರಾ?

2) ಬಾಬು ಜಗಜೀವನ್ ರಾಮ್ ರವರಿಗೆ ಕಾಂಗ್ರೆಸ್ ಪಕ್ಷದವರು ಕೊಟ್ಟ ಸನ್ಮಾನ ನಿಮಗೆ ಗೊತ್ತಾ?

3) ಬಾಬು ಜಗಜೀವನ್ ರಾಮ್ ರವರು ಕಾಂಗ್ರೆಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ) ಪ್ರಾರಂಭ ಮಾಡಿದ್ದು ಗೊತ್ತಾ?

4) ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದು ಯಾವಾಗ ಗೊತ್ತಾ? (1971ರಲ್ಲಲ್ಲ)

5) ನೀವು ಎಂದಾದರೂ ಜೈಲಿಗೆ ಹೋಗಿದ್ರಾ? ನೀವು ಆಸ್ತಿಪಾಸ್ತಿ ಕಳೆದುಕೊಂಡಿದ್ರಾ?

6) ಮಹಾನ್ ನಾಯಕರ ಜಯಂತಿಯ ದಿನದಂದು ರಾಜಕೀಯ ಮಾತುಗಳು ಅಗತ್ಯ ಇದೆಯಾ?

7) ಮಹಾನ್ ನಾಯಕರ ಜಯಂತಿಯ ದಿನದಂದು ನಿಮ್ಮ ರಾಜಕೀಯಕ್ಕಾಗಿ ಅವಾಸ್ತವಿಕ ಸಂಗತಿಗಳನ್ನು ಹೇಳುವ ಅಗತ್ಯ ಇದೆಯಾ?

8) ನಿನ್ನೆಯ ಜಯಂತಿ ಕಾರ್ಯಕ್ರಮ ಚುನಾವಣಾ ವೇದಿಕೆಯಾಗಿತ್ತಾ?

9) ಕೆಲವು ದಿನಗಳಾದರೂ, ಕೆಲವು ವೇದಿಕೆಗಳಾದರೂ ರಾಜಕೀಯ ಬಳಸದೆ ಜನರಿಗೆ ಪ್ರೇರಣೆ ತುಂಬುವ ಮಹಾನ್ ವ್ಯಕ್ತಿಗಳ ಬದುಕು ವಿಚಾರ ತಿಳಿಸುವ ಕಾರ್ಯಕ್ರಮಗಳಾಗಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.