ADVERTISEMENT

ಕಾವ್ಯದ ಮೂಲಕವಾದರೂ ಸತ್ಯ ಹೇಳಲಿ: ಎಲ್‌.ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 21:00 IST
Last Updated 23 ಅಕ್ಟೋಬರ್ 2022, 21:00 IST
‘ಸಂಗಂ’ ವಿಶ್ವಕವಿ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಕಲಾವಿದೆ ಮಾತಾ ಮಂಜಮ್ಮ ಜೋಗತಿ, ಸಂಸದ ಎಲ್‌.ಹನುಮಂತಯ್ಯ, ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು.
‘ಸಂಗಂ’ ವಿಶ್ವಕವಿ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಕಲಾವಿದೆ ಮಾತಾ ಮಂಜಮ್ಮ ಜೋಗತಿ, ಸಂಸದ ಎಲ್‌.ಹನುಮಂತಯ್ಯ, ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು.    

ಬಳ್ಳಾರಿ(ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆ): ವಿಶ್ವಕವಿ ಸಮ್ಮೇಳನದ ಕವಿತೆಗಳಲ್ಲಿ ಸಹಾನುಭೂತಿ, ಮಾನವೀಯತೆಗಾಗಿ ಶೋಧ ಕಂಡುಬಂದಿರುವುದು, ಈ ಸಮಯದ ತುರ್ತು ಏನು ಎಂಬುದನ್ನು ಬಿಡಿಸಿ ಹೇಳಿದೆ ಎಂದು ಸಂಸದ ಎಲ್‌.ಹನುಮಂತಯ್ಯ ಹೇಳಿದರು.

ಬಳ್ಳಾರಿಯ ‘ಅರಿವು’ ಸಂಸ್ಥೆ ಹಾಗೂ ‘ಸಂಗಂ’ ಜಂಟಿ ಆಯೋಗದಲ್ಲಿ, ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ‘ಪ್ರಜಾವಾಣಿ’ ಬಳಗದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸಂಗಂ ವಿಶ್ವಕವಿ ಸಮ್ಮೇಳನ ಭಾನುವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ದುರಿತ ಕಾಲದಲ್ಲಿ ಕವಿಗಳು, ನಾವಿದನ್ನು ಬರೆಯಬಹುದೆ, ಬರೆಯ ಬಾರದೆ, ಬರೆದರೆ.. ಬರೆಯದಿದ್ದರೆ ಎಂಬ ವೈರುಧ್ಯಗಳಲ್ಲಿ ಜೀಕುತ್ತಿದ್ದಾರೆ. ಸೃಜನಶೀಲ ಬರಹಗಾರರ ಮೇಲೆ ಅದೃಶ್ಯವಾದ ಅಧಿಕಾರ ದಮನಿಸುವ ಒತ್ತಡ ತರುತ್ತಿದೆ ಎಂದರು.

ADVERTISEMENT

ಹಿಂದುಳಿದವರ, ದಮನಿತರ, ದುರ್ಬಲರ ಧ್ವನಿಯಾಗುತ್ತಿಲ್ಲ, ಗಡಿ ಹಂಚಿಕೊಂಡ ದೇಶಗಳ ಕುರಿತು ಪ್ರೀತಿಯ, ಸಹಾನುಭೂತಿಯ ಪದಗಳು ಮೂಡುತ್ತಿಲ್ಲ. ಅಂಥ ಒತ್ತಡವನ್ನು ಮೀರಿಯೂ ತನ್ನ ಸದಾಶಯಗಳನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾನೆ ಎಂದರು.

ಭಿನ್ನಾಭಿಪ್ರಾಯಗಳು ಬಂದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಜೈಲಿಗೆ ಅಟ್ಟಲಾಗುತ್ತಿದೆ. ಸತ್ಯದ ಮಾತು ಆಚೆ ಬರುವುದಾದರೆ ದಮನಗೊಳಿಸುವ ಭೀತಿಯ ವಾತಾವರಣ ಮೂಡಿಸಿದ್ದಾರೆ ಎಂದು ಟೀಕಿಸಿದರು.

ಸತ್ಯವನ್ನು ನೇರವಾಗಿ ಹೇಳಲಾಗದೇ ಇದ್ದಲ್ಲಿ, ಸತ್ಯವನ್ನು ಕಾವ್ಯದ ಮೂಲಕ ವಾಗಿಯಾದರೂ ಹೇಳುವಂತಾಗಲಿ. ಆ ಕಾರಣಕ್ಕಾಗಿಯಾದರೂ ಇಂಥ ಕವಿ ಸಮ್ಮೇಳನಗಳು, ಗೋಷ್ಠಿಗಳು ನಿರಂತರವಾಗಲಿ ಎಂದು ಆಶಿಸಿದರು.

21 ಕವಿಗೋಷ್ಠಿಗಳ ನಂತರ ಸಮಾರೋಪ ಸಮಾರಂಭವನ್ನು ಕಲಾವಿದೆ ಮಾತಾ ಮಂಜಮ್ಮ ಜೋಗತಿ ಉದ್ಘಾಟಿಸಿದರು.

ಕವಿ ಎಚ್.ಎಸ್‌. ಶಿವಪ್ರಕಾಶ್‌, ಲೋಹಿಯಾ ಪ್ರಕಾಶನದ ಚೆನ್ನಬಸಣ್ಣ, ಸಂಗಂ ಸಮ್ಮೇಳನದ ಸಂಘಟನಾಕಾರ ರಾದ ಡಾ. ಅರವಿಂದ ಪಟೇಲ್‌, ಎಸ್‌. ಪನ್ನರಾಜ್‌, ಆರಿಫ್‌ ರಾಜಾ, ಅಜಯ್‌ ಬಣಕಾರ್‌, ಡಾ. ವೈ.ಸಿ. ಯೋಗಾನಂದ ರೆಡ್ಡಿ, ಕೆ. ಶಿವಲಿಂಗಪ್ಪ ಹಂದ್ಯಾಳ್‌, ವೀರೇಂದ್ರ ರವಿಹಾಳ್‌, ಮಧುಸೂದನ್‌ ಕಾರಿಗನೂರು, ಡಾ. ಗಡ್ಡಿ ದಿವಾಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ದಲಿಂಗೇಶ್‌ ರಂಗಣ್ಣನವರ, ಸಾಹಿತಿ ಕಮಲಾಕರ ಭಟ್‌, ಬಿಐಟಿಎಂ ಕಾಲೇಜಿನ ಅಧ್ಯಕ್ಷ ಮಹಿಪಾಲ್‌ ಇದ್ದರು.

ಹದಿನೆಂಟು ದೇಶಗಳಿಂದ ವಿವಿಧ ಭಾಷೆಯ ಕವಿಗಳು, ಮಣಿಪುರ, ಮಹಾರಾಷ್ಟ್ರ, ಕೇರಳ, ಬಿಹಾರ, ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ದೆಹಲಿ, ತೆಲಂಗಾಣ, ಅಸ್ಸಾಂ ರಾಜ್ಯಗಳ ಕವಿಗಳು ಭಾಗವಹಿಸಿದ್ದರು.

****

ದೇಶಭಕ್ತರು ದೇಶದ್ರೋಹಿ ಗಳಾಗಿದ್ದಾರೆ, ದೇಶದ್ರೋಹಿ ಗಳು ದೇಶಭಕ್ತರಾಗಿದ್ದಾರೆ. ದೇಶದ ಪರ ಧ್ವನಿ ಎತ್ತುವವರಿಗೆ ಜೈಲು, ಭೋಪರಾಕು ಹೇಳುವವರಿಗೆ ಪ್ರಶಸ್ತಿ ಸಾಮಾನ್ಯವಾಗಿದೆ

-ಎಲ್‌. ಹನುಮಂತಯ್ಯ, ಸಂಸದ

****

ನೆಲದ ಹಾಡು ಎನಿಸಿಕೊಳ್ಳುವ ಬುಡಕಟ್ಟು ಕಾವ್ಯಕ್ಕೆ ಪ್ರಾತಿನಿಧ್ಯ ನೀಡಲಾಗಲಿಲ್ಲ. ಕಾಶ್ಮೀರಿ, ಕೊಂಕಣಿ, ಚೀನಿ ಭಾಷಿಗರು ಆಚೆ ಉಳಿದರು. ಮುಂದಿನ ಸಲ ಈ ದೋಷಗಳನ್ನು ಸರಿಪಡಿಸಲಾಗುವುದು

-ಎಚ್‌.ಎಸ್‌.ಶಿವಪ್ರಕಾಶ, ಸಾಹಿತಿ

****

ರೋಗಗಳಿಗೆ ಸಂಗೀತದ ಚಿಕಿತ್ಸೆ ಇದೆಯೆಂದು ಗೊತ್ತಿತ್ತು, ಬಳ್ಳಾರಿಯ ವೈದ್ಯ ಸಮೂಹ ಸಾಮಾಜಿಕ ಸ್ವಾಸ್ಥ್ಯಕ್ಕೆಂದೇ ಕಾವ್ಯ ಚಿಕಿತ್ಸೆ ಕಂಡುಕೊಂಡಂತಿದೆ

-ಚೆನ್ನಬಸವಣ್ಣ, ಲೋಹಿಯಾ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.