ಮೈಸೂರು/ಕಲಬುರಗಿ: ರಾಜ್ಯದ ಕರಾವಳಿ ಪ್ರದೇಶ ಸೇರಿದಂತೆ ಬಹುತೇಕ ಕಡೆ ಮಂಗಳವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮೈಸೂರು ಭಾಗದ ಕೊಡಗು ಮತ್ತು ಹಾಸನದಲ್ಲಿ ಮಳೆ ಮಂಗಳವಾರವೂ ಮುಂದುವರಿದಿದೆ.
ಕಲ್ಯಾಣ ಕರ್ನಾಟಕದ ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದ್ದು, ರಾಯಚೂರು ಜಿಲ್ಲೆಯ ಕವಿತಾಳ ಸಮೀಪದ ದೋತರಬಂಡಿ ಹಳ್ಳ ತುಂಬಿ ಹರಿದ ಪರಿಣಾಮ ಸೇತುವೆ ಮುಳುಗಡೆಯಾಗಿದೆ.
ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಸೇತುವೆಯಲ್ಲಿನ ಗುಂಡಿ ಕಾಣದೆ ಬೈಕ್ ಸ್ಕಿಡ್ ಆಗಿ ನೀರಿನಲ್ಲಿ ಬಿದ್ದಿದ್ದ ಬೈಕ್ ಸವಾರ ಬಸವಲಿಂಗ ಬಡಿಗೇರ ಮತ್ತು ಹಿಂಬದಿ ಕುಳಿತಿದ್ದ ಆತನ ಅಜ್ಜಿ ಶಾಂತಮ್ಮ ಅವರನ್ನು ಗ್ರಾಮಸ್ಥರು ರಕ್ಷಿಸಿದರು.
ಉಟನಕೂರು ಗ್ರಾಮದಿಂದ ವಾಪಸಾಗುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಮೌನೇಶ ಸೇತುವೆ ಕಾಣದೆ ಹಳ್ಳಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಸ್ಥಳದಲ್ಲಿದ್ದ ಜನರು ಬೈಕ್ ಸವಾರ ಮೌನೇಶ ಅವರನ್ನು ಮೇಲೆತ್ತಿದ್ದಾರೆ. ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಅನ್ನು ಜೆಸಿಬಿ ಯಂತ್ರದ ಮೂಲಕ ಹೊರತೆಗೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಹೊರತುಪಡಿಸಿ ಕೊಡಗಿನ ಉಳಿದೆಲ್ಲ ತಾಲ್ಲೂಕುಗಳಲ್ಲಿ ಮಳೆ ತಗ್ಗಿದ್ದರೂ, ಗಾಳಿಯ ಆರ್ಭಟ ಕಡಿಮೆಯಾಗಿಲ್ಲ.
ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲ ಗ್ರಾಮದ ಜನತಾ ಕಾಲೊನಿಯಲ್ಲಿ ಮರ ಬಿದ್ದು ನಿವಾಸಿ ಪಿ.ಸಿ.ವಿಷ್ಣು ಬೆಳ್ಳಿಯಪ್ಪ (65) ಮಂಗಳವಾರ ಮೃತಪಟ್ಟರು. ಒಂದು ವಾರದಿಂದ ಮರ ಬಿದ್ದು ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ 2ಕ್ಕೆ ಏರಿದೆ.
ಭಾಗಮಂಡಲ ಹೋಬಳಿಯ ಬೆಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ಓಡಾಟಕ್ಕೆ ದೋಣಿ ಸಿದ್ಧಪಡಿಸಲಾಗಿದೆ. ಮೂರ್ನಾಡು–ನಾಪೋಕ್ಲು ನಡುವಿನ ಬೊಳಿಬಾಣೆ, ನಾಪೋಕ್ಲು– ಬಲಮುರಿ ಮಧ್ಯೆ ಸಂಪರ್ಕ ಸ್ಥಗಿತಗೊಂಡಿದೆ. ಕೊಡಗಿನಲ್ಲಿ ಅಂಗನವಾಡಿಗಳಿಗೆ ಬುಧವಾರವೂ ರಜೆ ನೀಡಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಸಕಲೇಶಪುರ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. ರಾಮನಾಥಪುರದ ಬಳಿ ಕಾವೇರಿ ನದಿ ಮೇ ಅಂತ್ಯಕ್ಕೆ ಮೈದುಂಬಿ ಹರಿಯುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಕೃಷ್ಣರಾಜಕಟ್ಟೆಯ ಮೇಲೆ ನೀರು ಭೋರ್ಗರೆಯುತ್ತಿದೆ.
ಸಫಾರಿ ಇಲ್ಲ: ಮಳೆ ಕಾರಣ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ, ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗೇಟ್ ಹಾಗೂ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ನಾಣಚ್ಚಿ ಗೇಟ್‌ನಲ್ಲಿ ಮೇ 28ರಿಂದ ಸಫಾರಿ ನಿಲ್ಲಿಸಲಾಗಿದೆ. ದಮ್ಮನಕಟ್ಟೆ (ಕಬಿನಿ) ಸಫಾರಿಗೆ ಮಾತ್ರ ಅವಕಾಶವಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಮೈಸೂರಿನ ಒಂಟಿಕೊಪ್ಪಲಿನ ಆಕಾಶವಾಣಿ ವೃತ್ತದ ಬಳಿ ಆಟೊದ ಮೇಲೆ ಮರ ಬಿದ್ದಿದ್ದು, ಜಖಂಗೊಂಡಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಮರದೂರು ಮೂಡಲಕೊಪ್ಪಲು ಮುಖ್ಯರಸ್ತೆಯಲ್ಲಿ ಮರ ಬಿದ್ದು, ವಿದ್ಯುತ್ ತಂತಿ ಹಾಗೂ ಕಂಬಗಳು ಹಾನಿಯಾಗಿವೆ.
ಹಾರಂಗಿ ಜಲಾಶಯದ ಒಳ ಹರಿವು 3,431 ಕ್ಯುಸೆಕ್‌ಗೆ ಏರಿಕೆಯಾಗಿದೆ. 2,859 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಸೋಮವಾರ 2,834.70 ಅಡಿ ಇದ್ದ ನೀರಿನ ಮಟ್ಟ 2837.45 ಅಡಿಗೆ ಹೆಚ್ಚಿದೆ. ಹೇಮಾವತಿ ಜಲಾಶಯಕ್ಕೆ ಒಳಹರಿವು 17,812 ಕ್ಯುಸೆಕ್ ದಾಖಲಾಗಿದೆ. 24 ಗಂಟೆಯಲ್ಲಿ ಜಿಲ್ಲೆಯ ಹೆತ್ತೂರಿನಲ್ಲಿ 13 ಸೆಂ.ಮೀ. ಮಳೆಯಾಗಿದೆ. ಕಬಿನಿ ಜಲಾಶಯದ ಒಳಹರಿವು 23 ಸಾವಿರ ಕ್ಯುಸೆಕ್‌ಗೆ ಹೆಚ್ಚಾಗಿದೆ. ಎರಡು ದಿನದಲ್ಲಿ 9 ಅಡಿ ನೀರು ಹರಿದು ಬಂದಿದ್ದು, ಜಲಾಶಯದ ಮಟ್ಟ 2269 ಅಡಿ ಇತ್ತು. (ಗರಿಷ್ಠ ಮಟ್ಟ 2,284).
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಒಂದೇ ದಿನದಲ್ಲಿ 4 ಅಡಿಗಳಷ್ಟು ನೀರು ಬಂದಿದೆ. ಸೋಮವಾರ 89.32 ಅಡಿ ಇದ್ದ ನೀರಿನ ಮಟ್ಟ ಮಂಗಳವಾರ 93 ಅಡಿಗೆ ತಲುಪಿದೆ. ಸಂಜೆಯಿಂದ 20 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬಂದಿದೆ. ಅಣೆಕಟ್ಟೆಯಿಂದ 364 ಕ್ಯುಸೆಕ್ ನೀರನ್ನು ಕುಡಿಯುವ ಉದ್ದೇಶಕ್ಕೆ ಹೊರ ಬಿಡಲಾಗುತ್ತಿದೆ.
ಬಾಳೆ ನಾಶ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ, ಹಂಗಳ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ 220 ಎಕರೆ ಹಾಗೂ ಹನೂರು ತಾಲ್ಲೂಕಿನ ಅನಾಪುರ, ಕಣ್ಣೂರು ಗ್ರಾಮಗಳಲ್ಲಿ 4 ಎಕರೆ ಬಾಳೆ ನಾಶವಾಗಿದೆ.
ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಭೀಮಾ ನದಿ ತುಂಬಿ ಹರಿಯುತ್ತಿದ್ದು, ಕಲಬುರಗಿಯ ಅಫಜಲಪುರ, ಜೇವರ್ಗಿ, ಶಹಾಬಾದ್, ಯಾದಗಿರಿ ಜಿಲ್ಲೆಯ ಶಹಾಪುರ, ಯಾದಗಿರಿ ತಾಲ್ಲೂಕಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗ್ರಾಮಗಳಲ್ಲಿ ನದಿ ಪಾತ್ರದ ಬಳಿ ಜನರು ಹೋಗದಂತೆ ಡಂಗುರ ಸಾರಲಾಗಿದೆ.
ನದಿಯಲ್ಲಿ ಕೊಚ್ಚಿಹೋದ ವೈದ್ಯ ವಿದ್ಯಾರ್ಥಿ
ಕೊಳ್ಳೇಗಾಲ(ಚಾಮರಾಜನಗರ): ಈಜಲು ಹೋದ ಬೆಂಗಳೂರಿನ ದಯಾನಂದ ಸಾಗರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಂದನ್ (19) ಮಂಗಳವಾರ ಶಿವನಸಮುದ್ರದ ದರ್ಗಾ ಹಿಂಭಾಗದ ಕಾವೇರಿ ನದಿಯಲ್ಲಿ ಕೊಚ್ಚಿ ಹೋದರು. ಅವರೊಂದಿಗೆ ಇದ್ದ ಸಹಪಾಠಿಗಳಾದ ಚತುರ ತುಷಾರ್ ಪವನ್ ಪ್ರಪುಲ್ಲ ತನೈ ರಜತ್ ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು. ಭರಚುಕ್ಕಿ ಸುತ್ತಮುತ್ತ ಪ್ರವಾಸಿ ತಾಣ ವೀಕ್ಷಿಸಲು ಬಂದಿದ್ದ ಅವರೆಲ್ಲ ಮಧ್ಯಾಹ್ನ ದರ್ಗಾ ಹಿಂದೆ ನದಿಯಲ್ಲಿ ಈಜಾಟವಾಡಿ ಮಧ್ಯದ ಬಂಡೆಗೆ ಬರುವಾಗ ದುರ್ಘಟನೆ ನಡೆದಿದೆ. ಅಗ್ನಿಶಾಮಕ ಠಾಣಾಧಿಕಾರಿ ಅರುಣ್‌ಕುಮಾರ್ ನೇತೃತ್ವದ ತಂಡ ಧಾವಿಸಿ ಕಾರ್ಯಾಚರಣೆ ನಡೆಸಿದರು. ನಂದನ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.