ADVERTISEMENT

ಮದ್ಯದ ಅಮಲಿನಲ್ಲಿ ಚರಂಡಿಗೆ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 5 ಮೇ 2020, 4:04 IST
Last Updated 5 ಮೇ 2020, 4:04 IST
   

ಬೆಂಗಳೂರು: ಲಾಕ್‌ಡೌನ್‌ ನಡುವೆಯೇ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದ ಮೊದಲ ದಿನವಾದ ಸೋಮವಾರ ಮದ್ಯದ ಅಮಲಿನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಮದ್ಯದ ಅಮಲಿನಲ್ಲಿದ್ದ ದೇವದಾಸ್ (22) ಎಂಬುವರು ಚರಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.

‘ಪಶ್ಚಿಮ ಬಂಗಾಳದ ದೇವದಾಸ್, ಕಾಮಾಕ್ಷಿಪಾಳ್ಯದಲ್ಲಿ ಕುಟುಂಬದ ಜೊತೆ ನೆಲೆಸಿದ್ದರು. ಅಂಗಡಿಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರ ಹೇಳಿದರು.

ADVERTISEMENT

‘ಸೋಮವಾರ ಬೆಳಿಗ್ಗೆ ಸ್ನೇಹಿತ ಸಮರ್ಥ್ ಜೊತೆ ದೇವದಾಸ್ ಮದ್ಯದಂಗಡಿಗೆ ಹೋಗಿ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದ್ದರು. ಮದ್ಯ ಕೈಗೆ ಸಿಗುತ್ತಿದ್ದಂತೆ ರಸ್ತೆಯಲ್ಲೇ ಕುಡಿದು, ಒಳರಸ್ತೆಯ ಮೂಲಕ ಮನೆಯತ್ತ ಹೊರಟಿದ್ದರು. ನಿಂತುಕೊಳ್ಳಲು ಆಗದ ಸ್ಥಿತಿಯಲ್ಲಿದ್ದ ಅವರು ಸ್ನೇಹಿತನ ಸಮೇತವೇ ಆಯತಪ್ಪಿ ಚರಂಡಿಗೆ ಬಿದ್ದಿದ್ದರು.’

‘ಚರಂಡಿಯಲ್ಲಿದ್ದ ಕಲ್ಲು ದೇವದಾಸ್ ಅವರ ತಲೆಗೆ ಬಡಿದಿತ್ತು. ತೀವ್ರ ಪೆಟ್ಟಾಗಿ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ನೇಹಿತ ಸಮರ್ಥ್‌ ಅವರಿಗೂ ಗಾಯವಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ಮದ್ಯದ ಪಾರ್ಟಿಯಲ್ಲಿ ರೌಡಿ ಕೊಲೆ

ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ಮದ್ಯದ ಪಾರ್ಟಿ ವೇಳೆ ರೌಡಿ ಕರಣ್‌ಸಿಂಗ್ (28) ಎಂಬಾತನನ್ನು ಕೊಲೆ ಮಾಡಲಾಗಿದೆ.

ಬಾಗಲಗುಂಟೆ ಬಳಿಯ ಸೀಡೆದಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಈ ಕೊಲೆ ನಡೆದಿದೆ.

‘ಸೋಮವಾರ ಬೆಳಿಗ್ಗೆಯಿಂದಲೇ ಮದ್ಯದ ಅಂಗಡಿಗಳು ತೆರೆದಿದ್ದವು. ಕರಣ್‌ಸಿಂಗ್‌ನ ತಮ್ಮ ಅರ್ಜುನ್ ಸಿಂಗ್, ಆತನ ಸ್ನೇಹಿತರು ಮದ್ಯ ಖರೀದಿಸಿ ತಂದು ಕೊಠಡಿಯೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಮದ್ಯ ಅಮಲಿನಲ್ಲಿ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದೇ ವೇಳೆ ಸ್ನೇಹಿತರೇ, ಚಾಕುವಿನಿಂದ ಅರ್ಜುನ್‌ ಸಿಂಗ್‌ನ ಹೊಟ್ಟೆಗೆ ಇರಿದಿದ್ದರು. ವಿಷಯ ತಿಳಿಯುತ್ತಿದ್ದಂತೆ ಕರಣ್‌ಸಿಂಗ್ ಸ್ಥಳಕ್ಕೆ ಹೋಗಿದ್ದ. ಆತನ ಜೊತೆಗೆಯೂ ಜಗಳ ತೆಗೆದಿದ್ದ ಆರೋಪಿಗಳು, ಚಾಕುವಿನಿಂದು ಇರಿದು ಕೊಂದಿದ್ದಾರೆ.’

‘ತೀವ್ರ ರಕ್ತಸ್ರಾವದಿಂದ ಕರಣ್‌ಸಿಂಗ್‌ ಮೃತಪಟ್ಟ. ಅರ್ಜುನ್‌ಸಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕರಣ್‌ಸಿಂಗ್ ಹಾಗೂ ತಮ್ಮ ಅರ್ಜುನ್‌ ಸಿಂಗ್ ಇಬ್ಬರೂ ರೌಡಿಶೀಟರ್‌ಗಳು’ ಎಂದೂ ಅವರು ತಿಳಿಸಿದರು.

ಮದ್ಯ ಖರೀದಿಗೆ ಹಣ ಕೊಡಲಿಲ್ಲವೆಂದು ಆತ್ಮಹತ್ಯೆಗೆ ಯತ್ನ

ಮದ್ಯ ಖರೀದಿಗೆ ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಹರೀಶ್ (23) ಎಂಬುವರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

‘ಕಾಮಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಪಾಳೇಗಾರ ಪಾಳ್ಯದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮೈ ಮೇಲೆ ಶೇ 80ರಷ್ಟು ಸುಟ್ಟ ಗಾಯಗಳಾಗಿರುವ ಹರೀಶ್‌ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಂಬಂಧಿಕರ ಹೇಳಿಕೆ ಪಡೆಯಲಾಗಿದೆ. ಗಾಯಾಳು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.