
ಬೆಂಗಳೂರು: ‘ಇಡೀ ಜಗತ್ತು ಈಗ ವಿಧ್ವಂಸಕ ಮನಸ್ಥಿತಿಯಲ್ಲಿ ಇದೆ. ಎಷ್ಟೋ ನಾಯಕರು ಏನನ್ನೋ ಒಂದನ್ನು ಧ್ವಂಸಗೊಳಿಸುವ ಕಾರ್ಯದಲ್ಲಿದ್ದಾರೆ. ಜತೆಗೆ ತಾರಾ ಹೋಟೆಲುಗಳಲ್ಲಿ ಔತಣಕೂಟ ನಡೆಸುತ್ತಾರೆ’ ಎಂದು ಸಾಹಿತಿ ಬಾನು ಮುಷ್ತಾಕ್ ಹೇಳಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಆರಂಭವಾದ ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯ ಆಶಯ ನುಡಿಗಳ ಜತೆಗೆ, ‘ಬಾನು ಬಾನುವಾಗಿ, ಬಾನು ಬಂಡಾಯವಾಗಿ’ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಪ್ಯಾಲೆಸ್ಟೀನ್ ಧ್ವಂಸವಾಗುತ್ತಿದೆ. ಇಸ್ರೇಲ್‌ನ ಜೈಲಿನಲ್ಲಿ ಕುಳಿತ ಪ್ಯಾಲೆಸ್ಟೇನಿಯನ್ ಲೇಖಕ ಬಶೀರ್, ತನ್ನ ನಾಡು ಛಿದ್ರವಾಗುತ್ತಿರುವ ಬಗ್ಗೆ ಬರೆದ ಕಾದಂಬರಿಗೆ ಪ್ರತಿಷ್ಠಿತ ಪ್ರಶಸ್ತಿ ಬಂದಿತು. ಆ ಪ್ರಶಸ್ತಿ ಸ್ವೀಕರಿಸುವಾಗ ಬಶೀರ್ ಅವರ ತುಟಿಗಳು ಅದರುತ್ತಿದ್ದವು, ಗಂಟಲು ಉಬ್ಬಿತ್ತು, ಕಣ್ಣಾಲಿಗಳು ತುಂಬಿದ್ದವು. ತನ್ನ ಜಗತ್ತು ಧ್ವಂಸವಾಗುತ್ತಿರುವ ಕುರಿತಾಗಿ ಬಶೀರ್ ತಟಸ್ಥನಾಗೂ ಇರಲಿಲ್ಲ, ಮೌನವಾಗೂ ಇರಲಿಲ್ಲ’ ಎಂದರು.
‘ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಮತ್ತು ಕ್ರೌರ್ಯಗಳ ವಿಚಾರದಲ್ಲಿ ತಟಸ್ಥ ಅಥವಾ ಮೌನವಾಗಿ ಬಿಟ್ಟರೆ, ಅವು ಸರಿ ಎಂದು ಆ ಕೃತ್ಯಗಳನ್ನು ದೃಢೀಕರಿಸಿದಂತಾಗುತ್ತದೆ. ಇಲ್ಲದವರ, ತುಳಿತಕ್ಕೆ ಒಳಗಾದವರ, ಮಹಿಳೆಯರ, ನೋವುಂಡವರ ಪರವಾಗಿ ದನಿ ಎತ್ತುವುದು ಮತ್ತು ಅವರ ಪರವಾಗಿ ನಿಲ್ಲುವುದು ಬಂಡಾಯದ ಬದ್ಧತೆ. ಹೀಗಾಗಿ ಮೌನ ಯಾವತ್ತಿಗೂ ನನ್ನ ಆಯ್ಕೆಯಾಗಿರಲಿಲ್ಲ’ ಎಂದು ವಿವರಿಸಿದರು.
‘ಎಷ್ಟೋ ಸಂದರ್ಭದಲ್ಲಿ ನೇರವಾಗಿ ಮೌನ ಮುರಿಯುವುದು ಸಾಧ್ಯವಾಗುವುದಿಲ್ಲ. ಆದರೆ ಪ್ರತಿರೋಧವನ್ನು ತೋರಲೇಬೇಕಲ್ಲವೇ? ಇಂತಹ ಪ್ರತಿರೋಧದ ಕಿಡಿಗಳು ಬಂಡಾಯ ಸಾಹಿತ್ಯವನ್ನು ರೂಪಿಸಿದ್ದು. ನನ್ನ ಕಥೆಗಳ ಪಾತ್ರಗಳೂ ಇದಕ್ಕೆ ಹೊರತಲ್ಲ. ವ್ಯಕ್ತವೋ ಅಥವಾ ಅವ್ಯಕ್ತವೋ, ಪ್ರತಿರೋಧದಿಂದಲೇ ಅವು ರೂಪುಗೊಂಡಿವೆ’ ಎಂದರು.
‘ಎದೆಯ ಹಣತೆ’ಯ ‘ಹೈಹೀಲ್ಡ್ ಶೂ’ನ ಆರಿಫಾ ಅಂಥದ್ದೇ ಒಂದು ಪಾತ್ರ. ಆಕೆಯ ಗಂಡ ನಯಾಜ್, ತನ್ನ ಅತ್ತಿಗೆ ನಸೀಮಾಳ ಹೈಹೀಲ್ಡ್ ಚಪ್ಪಲಿಗಳಿಂದ ಆಕರ್ಷಿತನಾಗಿ. ಆರಿಫಾಳೂ ಅದನ್ನು ಧರಿಸಲಿ ಎಂದು ಬಯಸುತ್ತಾನೆ. ಒಂದು ಹಂತದಲ್ಲಿ ಬಲವಂತದಿಂದ ಆರಿಫಾಳ ಕಾಲಿಗೆ ಅವುಗಳನ್ನು ತೊಡಿಸುತ್ತಾನೆ. ಆಕೆ ಐದು ತಿಂಗಳ ಗರ್ಭಿಣಿ. ಗಂಡನ ಒತ್ತಾಸೆಗೆ ಹೈಹೀಲ್ಡ್ ಚಪ್ಪಲಿ ಹಾಕುತ್ತಾಳೆ. ಹಿಂಸೆಯಾದರೂ ಸಹಿಸಿಕೊಳ್ಳುತ್ತಾಳೆ. ಆದರೆ ತನ್ನ ಒಡಲಲ್ಲಿರುವ ಮಗುವಿಗೆ ಉಸಿರುಕಟ್ಟುತ್ತಿದೆ ಎಂದು ಗೊತ್ತಾದಾಗ, ತನ್ನೆಲ್ಲಾ ಭಾರವನ್ನು ಚಪ್ಪಲಿ ಮೇಲೆ ಹೇರಿ ಅದನ್ನು ಮುರಿಯುತ್ತಾಳೆ. ನೇರ ಪ್ರತಿರೋಧ ಸಾಧ್ಯವಿಲ್ಲದಿದ್ದಾಗ, ಈ ರೀತಿಯ ಪ್ರತಿರೋಧವಾರೂ ಇರಬೇಕು’ ಎಂದು ವಿಸ್ತರಿಸಿದರು.
‘ಧ್ವಂಸವಾಗಿದ್ದು ಮಸೀದಿಯಲ್ಲ ಭ್ರಾತೃತ್ವ’
‘ಭಾರತವು ಬಾಬಾಸಾಹೇಬ ಅಂಬೇಡ್ಕರ್ ಮತ್ತು ಭಾತೃತ್ವವನ್ನು ಕಳೆದುಕೊಂಡದ್ದು ಇದೇ ಡಿಸೆಂಬರ್ 6ರಂದು. ಇದು ಕರಾಳ ಡಿಸೆಂಬರ್ 6’ ಎಂದು ಬಾನು ಮುಷ್ತಾಕ್ ಅವರು ಹೇಳಿದರು. ‘ದೇಶದ ಜನರಿಗೆ ಸಮಾನತೆ ಭ್ರಾತೃತ್ವವನ್ನು ಬೋಧಿಸಿದ್ದ ಅಂಬೇಡ್ಕರ್ ಅವರು ಪರಿನಿರ್ವಾಣವಾದದ್ದು ಇದೇ ದಿನ. ಇದೇ ದಿನ ಬಾಬರಿ ಮಸೀದಿಯೂ ಧ್ವಂಸವಾಯಿತು. ಅಲ್ಲಿ ಧ್ವಂಸವಾಗಿದ್ದು ಮಸೀದಿಯಲ್ಲ. ಬದಲಿಗೆ ದೇಶದ ಜನರ ಭ್ರಾತೃತ್ವ ಭಾವನೆ. ಇವೆರಡೂ ನಮ್ಮ ಪ್ರಜಾಪ್ರಭುತ್ವಕ್ಕೆ ಆದ ನಷ್ಟ’ ಎಂದರು. ‘ಕೆಲವೊಮ್ಮೆ ಇತಿಹಾಸವನ್ನು ತಿರುಗಿ ನೋಡಲೇಬೇಕಾಗುತ್ತದೆ. ನಾವು ಕಳೆದುಕೊಂಡದ್ದು ಏನು ಮತ್ತು ಮುಂದೇನು ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಹಿಂತಿರುಗಿ ನೋಡಲೇಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.