ADVERTISEMENT

ಸಾಲ ಮರುಪಾವತಿ ವಿಳಂಬ: ಎಫ್‌ಐಆರ್ ಸಲ್ಲ; ಹೈಕೋರ್ಟ್‌

ಅಪರಾಧಿಕ ನ್ಯಾಯಶಾಸ್ತ್ರ ದಿಕ್ಕು ತಪ್ಪೀತು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:35 IST
Last Updated 5 ಫೆಬ್ರುವರಿ 2026, 15:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸಾಲದ ಮೊತ್ತ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಗ್ರಾಹಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾ ಹೋದರೆ ನಮ್ಮ ಅಪರಾಧಿಕ ನ್ಯಾಯಶಾಸ್ತ್ರ ನಿಶ್ಚಿತವಾಗಿ ದುರುಪಯೋಗವಾಗುತ್ತದೆ’ ಎಂದು ಹೈಕೋರ್ಟ್‌, ಪ್ರಾಸಿಕ್ಯೂಷನ್‌ ನಡೆಗೆ ಅತೀವ ಕಳವಳ ವ್ಯಕ್ತಪಡಿಸಿದೆ.

‘ನನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಮಂಗಳೂರು ತಾಲ್ಲೂಕಿನ ಕಂಕನಾಡಿಯ ಉದ್ಯಮಿ ಮೊಹಮದ್ ರಫಾನ್‌ (38) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠವು ಪ್ರಾಸಿಕ್ಯೂಷನ್‌ ಅನ್ನು ಉದ್ದೇಶಿಸಿ, ‘ಮೂರು ತಿಂಗಳ ಸಾಲ ತುಂಬಲಿಲ್ಲ ಎಂದು ನಾಲ್ಕನೇ ತಿಂಗಳಿಗೆ ಸಾಲ ಪಡೆದ ಗ್ರಾಹಕನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾ ಹೋದರೆ ಗತಿಯೇನು’ ಎಂದು ಪ್ರಶ್ನಿಸಿತು.

ADVERTISEMENT

‘ಅರ್ಜಿದಾರರು ತಾವು ಪಡೆದ ಸಾಲಕ್ಕೆ ಪ್ರತಿಯಾಗಿ ಈಗಾಗಲೇ ಸಾಕಷ್ಟು ಮೊತ್ತವನ್ನು ಮರುಪಾವತಿ ಮಾಡಿದ್ದಾರೆ. ಮೂರು ತಿಂಗಳಿನಿಂದ ಮರುಪಾವತಿ ಮಾಡಿಲ್ಲ ಎಂದು ನಾಲ್ಕನೇ ತಿಂಗಳಿನಲ್ಲೇ ಕ್ರಿಮಿನಲ್‌ ಪ್ರಕರಣ ಹೂಡಿದರೆ ಅಪರಾಧಿಕ ನ್ಯಾಯ ಜನಸಾಮಾನ್ಯರನ್ನು ಸುಲಿದುಬಿಡುತ್ತದೆಯಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿತು.

ಇದಕ್ಕೆ ಪ್ರತಿಯಾಗಿ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌, ‘ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಸೀಮಿತವಾಗಿದೆಯಾದರೂ, ಇದರಲ್ಲಿ ಸಾರ್ವಜನಿಕರ ಹಣ ಇದೆ ಎಂಬ ಕಾರಣಕ್ಕೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ, ತನಿಖೆಗೆ ತಡೆ ನೀಡಬಾರದು’ ಎಂದು ಕೋರಿದರು.

ಈ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ನ್ಯಾಯಪೀಠ, ‘ಅರ್ಜಿದಾರರು ಮೂರು ತಿಂಗಳಿನಿಂದ ಸಾಲ ತುಂಬಿಲ್ಲ ಎಂಬುದನ್ನು ಬಿಟ್ಟರೆ ಅವರ ವಿರುದ್ಧ ಬೇರೆ ಯಾವ ಆಪಾದನೆ ಇದೆ. ಅಷ್ಟೊಂದು ತರದೂದು ಇದ್ದರೆ ಸರ್‌ಫೇಸಿ (ಹಣಕಾಸು ಸ್ವತ್ತುಗಳ ಭದ್ರತೆ, ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ) ಕಾಯ್ದೆಯಡಿ ಕ್ರಮಕ್ಕೆ ಮುಂದಾಗಬಹುದಿತ್ತಲ್ಲವೇ? ಈ ರೀತಿ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾ ಹೋದರೆ ಇದಕ್ಕೆಲ್ಲಾ ಕೊನೆ ಎಲ್ಲಿದೆ? ಇಂತಹ ವ್ಯವಸ್ಥೆ ಶ್ರೀಸಾಮಾನ್ಯರನ್ನು ಹರಿದು ಮುಕ್ಕಿಬಿಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿತು. ಅಂತೆಯೇ, ಪ್ರಕರಣದ ತನಿಖೆಗೆ ತಡೆ ನೀಡಿ ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.  

ಕೋರಿಕೆ ಏನು?: ಮಂಗಳೂರು ಪೂರ್ವ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 316(2), 316(5), 318(2), 318(3) ಮತ್ತು 3(5)ರ ಅಡಿಯಲ್ಲಿ ಅರ್ಜಿದಾರರನ್ನು 15ನೇ ಆರೋಪಿಯನ್ನಾಗಿಸಿ ದೂರು ದಾಖಲಿಸಿಕೊಂಡಿದ್ದಾರೆ. ‘ಈ ದೂರು ಮತ್ತು ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 6ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿರುವ ವಿಚಾರಣೆ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಶ್ರೀಶ್ರೀ ವಿರುದ್ಧದ ಎಫ್‌ಐಆರ್: ಆಕ್ಷೇಪಣೆ ಸಲ್ಲಿಕೆ

ಕಗ್ಗಲೀಪುರ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಆರೋಪದಡಿ ಆರ್ಟ್ ಆಫ್ ಲಿವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶ್ರೀ ರವಿಶಂಕರ ಗುರೂಜಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಪ್ರಾಸಿಕ್ಯೂಷನ್‌, ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ.

‘ನನ್ನ ವಿರುದ್ಧ, ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ಫೋರ್ಸ್‌ (ಬಿಎಂಟಿಎಫ್‌) ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಶ್ರೀಶ್ರೀ ರವಿಶಂಕರ ಗುರೂಜಿ (68) ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಸಕದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್‌.ಬೆಳ್ಳಿಯಪ್ಪ ಅರ್ಜಿಗೆ ಸಂಬಂಧಿಸಿದಂತೆ ಅಸಲು ದಾವೆಗಳ ಉಲ್ಲೇಖಗಳೂ ಸೇರಿದಂತೆ ಬೃಹತ್‌ ಕಡತಗಳ ಆಕ್ಷೇಪಣಾ ದಸ್ತಾವೇಜನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.  

ಶ್ರೀಶ್ರೀ ರವಿಶಂಕರ ಗುರೂಜಿ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 192 ಎ ಅಡಿಯಲ್ಲಿ ಬಿಎಂಟಿಎಫ್‌ ಎಫ್‌ಐಆರ್ ದಾಖಲಿಸಿದೆ. ರವಿಶಂಕರ ಗುರೂಜಿ ಪರ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.

ನ್ಯಾ.ಎಂ.ನಾಗಪ್ರಸನ್ನ

ಸಬ್‌ ರಿಜಿಸ್ಟ್ರಾರ್ ಕಚೇರಿಗಳ ಕಾಳಜಿ ಚೆನ್ನಾಗಿ ಗೊತ್ತಿದೆ..!

‘ಸಬ್ ರಿಜಿಸ್ಟ್ರಾರ್ ಕಚೇರಿಗಳು ಅಲ್ಲಿನ ನೌಕರರು ಅಧಿಕಾರಿಗಳು ಹಾಗೂ ಸಿಬ್ಬಂದಿ ಎಷ್ಟರಮಟ್ಟಿಗೆ ಸಾರ್ವಜನಿಕ ಕಾಳಜಿಯಿಂದ ಸರ್ಕಾರದ ಕೆಲಸ ಮಾಡುತ್ತಾರೆ ಎಂಬುದು ಚೆನ್ನಾಗಿ ಗೊತ್ತಿದೆ..!’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಕುಟುಕಿದೆ. ‘ನಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಡಿ.ಹಿತೇಂದ್ರ ಮತ್ತು ಎಚ್‌.ವಿಜಯಲಕ್ಷ್ಮಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಪಿ.ಎನ್‌.ಮನಮೋಹನ್‌ ‘ಅರ್ಜಿದಾರರು ಯಾವುದೇ ತಪ್ಪು ಮಾಡಿಲ್ಲ. ಸಬ್‌ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಯ ಕರ್ತವ್ಯದ ಕುರಿತಾದ ಸುಪ್ರಿಂ ಕೋರ್ಟ್‌ ಆದೇಶಗಳಿಗೆ ಅನುಗುಣವಾಗಿ ಈ ಪ್ರಕರಣವನ್ನು ಮನ್ನಿಸಬೇಕು’ ಎಂದು ಕೋರಿದರು. ಇದಕ್ಕೆ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ‘ಅರ್ಜಿದಾರರು ತನಿಖೆಗೆ ಸಹಕಾರ ನೀಡುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ಎಲ್ಲವನ್ನೂ ರಿಜಿಸ್ಟರ್‌ ಮಾಡಬೇಕೆಂಬ ಭರದಲ್ಲಿ ದಾಖಲೆಗಳನ್ನು ಮತ್ತು ವ್ಯಕ್ತಿಗಳನ್ನು ಸರಿಯಾಗಿ ಗುರುತಿಸದೇ ಹೋದರೆ ಅದಕ್ಕೆ ಕಚೇರಿಯೊಳಗಿನ ಸಿಬ್ಬಂದಿಯೇ ಹೊಣೆಯಲ್ಲವೇ’ ಎಂದು ಪ್ರಶ್ನಿಸಿತು. ಅಂತೆಯೇ ಪ್ರಕರಣದ ತನಿಖೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿತು.

ಕೋರಿಕೆ: ‘ಸ್ಥಿರಾಸ್ತಿ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದದ ಸಮಯದಲ್ಲಿ ಲಗತ್ತಿಸಲಾದ ಹಳೆಯ ಫೋಟೊವನ್ನು ನೋಂದಣಿ ಸಮಯದಲ್ಲಿ ಕಟ್‌ ಅಂಡ್‌ ಪೇಸ್ಟ್‌ ಮಾಡಲಾಗಿದೆ ಎಂಬ ಆರೋಪದಡಿ 2025ರ ಡಿಸೆಂಬರ್ 4ರಂದು ದಾಖಲಾಗಿರುವ ಎಫ್‌ಐಆರ್‌ ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಿಸಿಎಚ್‌–71ರಲ್ಲಿ ನಡೆಯುತ್ತಿರುವ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.