ಮೈಸೂರು/ಎಚ್.ಡಿ.ಕೋಟೆ: ಅರಣ್ಯ ಸಚಿವ ಆರ್.ಶಂಕರ್ ಹಾಗೂ ಅವರ ಬೆಂಬಲಿಗರು ಸರ್ಕಾರಿ ಸ್ವಾಮ್ಯದ ಲಾಡ್ಜ್‌ನಲ್ಲಿ 3 ದಿನಗಳಿಂದ ವಾಸ್ತವ್ಯ ಹೂಡಿದ್ದಕ್ಕೆ ಹಣ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್ ಸಂಸ್ಥೆಗೆ ಸೇರಿದ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ರಿವರ್ ಲಾಡ್ಜ್‌ನಲ್ಲಿ ಸಚಿವರ ಸಂಬಂಧಿಕರು, ಬೆಂಬಲಿಗರು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮಂದಿ ಆ.3ರಿಂದ 5ರ ವರೆಗೆ ವಾಸ್ತವ್ಯ ಹೂಡಿದ್ದರು.
ಈ ಸಂದರ್ಭದಲ್ಲಿ ಅವರು ಸಫಾರಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡಿದ್ದರು. ಆದರೆ, ಅವರು ಹಣ ನೀಡಿಲ್ಲ ಎಂಬ ಕುರಿತ ಪ್ರತಿಕ್ರಿಯೆಗೆ ಲಾಡ್ಜ್ ವ್ಯವಸ್ಥಾಪಕ ಗಂಗಸ್ವಾಮಿ ಹಾಗೂ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ ಪ್ರತಿಕ್ರಿಯೆಗೆ ಸಿಗಲಿಲ್ಲ.
‘ಇಲ್ಲಿ ಒಂದು ದಿನಕ್ಕೆ ಕನಿಷ್ಠ ₹ 8,500ದಿಂದ ₹ 14,000ರ ವರೆಗೆ ಬಾಡಿಗೆ ಇದೆ. ಆನ್‌ಲೈನ್‌ನಲ್ಲಿ ಹಾಗೂ ಬೆಂಗಳೂರಿನಲ್ಲಿ ಬುಕ್ಕಿಂಗ್ ನಡೆಯುತ್ತದೆ. ಸಚಿವರು ಬಂದಾಗ ಅಧಿಕೃತ ಕಾರ್ಯಕ್ರಮಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆ ವೆಚ್ಚವನ್ನು ಭರಿಸುತ್ತದೆ. ಆದರೆ, ಅವರೊಟ್ಟಿಗೆ 30 ಮಂದಿ ಬಂದರೆ ಅವರ ವೆಚ್ಚ ಯಾರು ಕೊಡುತ್ತಾರೆ ಎಂಬುದು ತಿಳಿಯುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಲಾಡ್ಜ್ ಅಧಿಕಾರಿಯೊಬ್ಬರು ತಿಳಿಸಿದರು.
ಸಾಮಾನ್ಯವಾಗಿ ವಾರಾಂತ್ಯದಲ್ಲಿ ಲಾಡ್ಜ್‌ನ ಎಲ್ಲ ಕೋಣೆಗಳನ್ನು ಸಾಕಷ್ಟು ಮುಂಚಿತವಾಗಿಯೇ ಕಾಯ್ದಿರಿಸಲಾಗಿರುತ್ತದೆ. ಮುಂಗಡ ಕಾಯ್ದಿರಿಸಿದ್ದನ್ನು ರದ್ದು ಮಾಡಿ, ಸಚಿವರು ಹಾಗೂ ಅವರ ಬೆಂಬಲಿಗರಿಗೆ ಅವಕಾಶ ನೀಡಲಾಗಿತ್ತೇ ಎಂಬ ಪ್ರಶ್ನೆಗೂ ಲಾಡ್ಜ್ ಅಧಿಕಾರಿಗಳು ಉತ್ತರ ನೀಡಲು ನಿರಾಕರಿಸಿದರು.
ಅಹವಾಲು ಸಲ್ಲಿಸಲು ಹಲವು ಸಂಘ– ಸಂಸ್ಥೆಯವರು, ಆದಿವಾಸಿಗಳು, ರೈತರು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಸಚಿವರ ಭೇಟಿಯನ್ನು ನಿರಾಕರಿಸಲಾಯಿತು.
ಬಿಲ್ಲು ಪಾವತಿಸಲಾಗಿದೆ: ‘ಉಳಿದುಕೊಂಡಿದ್ದ ಲಾಡ್ಜ್‌ನ ಎಲ್ಲ ಬಿಲ್ಲುಗಳನ್ನು ಪಾವತಿಸಲಾಗಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ’ ಎಂದು ಸಚಿವರ ಆಪ್ತ ಸಹಾಯಕ ಮೋಹನ್ ತಿಳಿಸಿದ್ದಾರೆ.
*ಕಬಿನಿ ಜಂಗಲ್ ಲಾಡ್ಜಸ್‌ಗೆ ನಾಲ್ಕೈದು ಕುಟುಂಬದವರು ಒಟ್ಟಿಗೆ ಹೋಗಿದ್ದೆವು. ಅಲ್ಲಿ ಆದ ಖರ್ಚಿನ ಬಿಲ್ ಅನ್ನು ಸಂಪೂರ್ಣ ಪಾವತಿ ಮಾಡಿದ್ದೇವೆ. ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ.
-ಶಂಕರ್, ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.