ADVERTISEMENT

ಲೋಕಸಭಾ ಚುನಾವಣೆ: ಜೆಡಿಎಸ್‌ ಪಟ್ಟು ‘ಕೈ’ ಪಾಳಯ ಚಡಪಡಿಕೆ

ಸುಮಲತಾ ಪಟ್ಟು–ಕಾಂಗ್ರೆಸ್‌ ಇಕ್ಕಟ್ಟು; ಮೈಸೂರು ಕ್ಷೇತ್ರಕ್ಕೆ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 20:00 IST
Last Updated 2 ಮಾರ್ಚ್ 2019, 20:00 IST
   

ಬೆಂಗಳೂರು: ಮಂಡ್ಯದಿಂದ ಕಣಕ್ಕಿಳಿಯುವುದಾಗಿ ಸುಮಲತಾ ಅಂಬರೀಷ್‌ ಪಟ್ಟು ಹಿಡಿದಿರುವುದು, ಹಾಲಿ ಕಾಂಗ್ರೆಸ್‌ ಸಂಸದರಿರುವ ಕ್ಷೇತ್ರವೊಂದರ ಜೊತೆಗೆ ಮೈಸೂರು ಕ್ಷೇತ್ರದ ಮೇಲೆಯೂ ಜೆಡಿಎಸ್‌ ಕಣ್ಣು ಬಿದ್ದಿರುವುದು ‘ಕೈ’ ಪಾಳಯದಲ್ಲಿ ಚಡಪಡಿಕೆ ಸೃಷ್ಟಿಸಿದೆ.

ಕಾಂಗ್ರೆಸ್‌ ಪ್ರತಿನಿಧಿಸುತ್ತಿರುವ 10 ಕ್ಷೇತ್ರಗಳ ಪೈಕಿ ಯಾವುದನ್ನೂ ಬಿಟ್ಟುಕೊಡಲು ಆ ಪಕ್ಷದ ನಾಯಕರು ಸಿದ್ಧರಿಲ್ಲ. ಅವುಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಚೌಕಾಶಿ ಮಾಡಿ ಎಂಬ ನಿಲುವಿಗೆ ಕಾಂಗ್ರೆಸ್‌ ನಾಯಕರು ಬಂದಿದ್ದಾರೆ. ಹೀಗಾಗಿ, ಮೈತ್ರಿ ಮಧ್ಯೆ ಈ ವಿಷಯದಲ್ಲಿ ಗೊಂದಲ ಮುಂದುವರಿದಿದೆ.

ಹಾಲಿ ಪ್ರತಿನಿಧಿಸುವ ಕ್ಷೇತ್ರಗಳ (ಮಂಡ್ಯ, ಹಾಸನ) ಜೊತೆಗೆ ಪಕ್ಷದ ಪ್ರಾಬಲ್ಯ ಇರುವ ಕಾಂಗ್ರೆಸ್‌ ಸಂಸದರಿರುವ ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ನಾಯಕರು ಹಟ ಹಿಡಿದಿದ್ದಾರೆ. ಅಲ್ಲದೆ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಮೈಸೂರು–ಕೊಡಗು, ಚಿಕ್ಕಮಗಳೂರು–ಉಡುಪಿಯತ್ತಲೂ ಕಣ್ಣು ಹಾಯಿಸಿದ್ದಾರೆ.

ADVERTISEMENT

ಚುನಾವಣಾ ಮೈತ್ರಿ ಸಲೀಸಾಗಿ ನಡೆಯಲಿದೆ ಎಂದು ಉಭಯ ಪಕ್ಷಗಳ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಯಾರೊಬ್ಬರೂ ತಮ್ಮ ಪಟ್ಟು ಸಡಿಲಿಸುವ ಸಾಧ್ಯತೆ ಇಲ್ಲ. ಹೀಗಾಗಿ, ಸೀಟು ಹೊಂದಾಣಿಕೆ ಗೊಂದಲ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಮಧ್ಯದ ಮಾತುಕತೆಯ ಮಧ್ಯೆಯೇ ಇತ್ಯರ್ಥವಾಗುವ ಸನ್ನಿವೇಶ ಸೃಷ್ಟಿಯಾಗಿದೆ.

‘ಸದ್ಯ ಜೆಡಿಎಸ್ ಸಂಸದರು ಪ್ರತಿನಿಧಿಸುವ ಮಂಡ್ಯ, ಹಾಸನ ಬಿಟ್ಟುಕೊಡುತ್ತೇವೆ. ಶಿವಮೊಗ್ಗ, ವಿಜಯಪುರ ಕೊಡಲು ಅಷ್ಟೇನೂ ತಕರಾರಿಲ್ಲ. ಇದರ ಜತೆಗೆ ಹೆಚ್ಚೆಂದರೆ 1–2 ಕ್ಷೇತ್ರ ಬಿಟ್ಟುಕೊಡಲು ಸಿದ್ಧ’ ಎಂಬುದು ಕಾಂಗ್ರೆಸ್‌ ರಾಜ್ಯ ನಾಯಕರ ಸ್ಪಷ್ಟ ನುಡಿ.

ಮೈಸೂರನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ. ಚಿಕ್ಕಬಳ್ಳಾಪುರ ಪ್ರತಿನಿಧಿಸುತ್ತಿರುವ ವೀರಪ್ಪ ಮೊಯಿಲಿ, ರಾಹುಲ್ ಗಾಂಧಿ ಜತೆಗೆ ಆಪ್ತ ಸಂಬಂಧ ಹೊಂದಿದ್ದು, ಅದನ್ನು ಕಿತ್ತುಕೊಳ್ಳುವುದು ಕಷ್ಟ ಎಂಬ ಚರ್ಚೆ ಕಾಂಗ್ರೆಸ್‌ ಪಡಸಾಲೆಯಲ್ಲಿದೆ. ಹೀಗಾಗಿ, ಇದೇ 4ರಂದು ನಡೆಯಲಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿಖಿಲ್‌ ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ. ಅವರಿಗೆ ಮಂಡ್ಯ ಅಥವಾ ಮೈಸೂರು ಸೂಕ್ತ ಕ್ಷೇತ್ರ ಎನ್ನುವುದು ಜೆಡಿಎಸ್‌ ನಾಯಕರ ನಿಲುವು. ಆದರೆ, ಮಂಡ್ಯದಲ್ಲಿ ಸುಮಲತಾ ಅಂಬರೀಷ್‌ ಕಣಕ್ಕಿಳಿದರೆ ನಿಖಿಲ್‌ ಅವರನ್ನು ಜೆಡಿಎಸ್‌ ಅಖಾಡಕ್ಕಿಳಿಸುವ ಸಾಧ್ಯತೆ ಇಲ್ಲ ಎಂಬ ಮಾತಿದೆ. ಮೈಸೂರು ಕ್ಷೇತದಿಂದ ನಿಖಿಲ್‌ ಕಣಕ್ಕಿಳಿದರೆ ಬಿಜೆಪಿಗೆ ನೇರ ಪೈಪೋಟಿ ನೀಡುವ ಜೊತೆಗೆ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಆ ಪಕ್ಷದ ನಾಯಕರದ್ದು. ಈ ಮಾತನ್ನು ಸಚಿವ ಜಿ.ಟಿ. ದೇವೇಗೌಡ ಕೂಡಾ ಪ್ರಸ್ತಾಪಿಸಿದ್ದಾರೆ.

ಆದರೆ, ಇದಕ್ಕೆ ಶನಿವಾರ ಖಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಸಚಿವ ಜಿ.ಟಿ. ದೇವೇಗೌಡರು ಹೇಳಿದ ತಕ್ಷಣ ಅದೇ ಅಂತಿಮವಲ್ಲ. ಪಕ್ಷದ ವರಿಷ್ಠರ ಮಾತನ್ನು ಅವರೂ ಕೇಳಬೇಕಾಗುತ್ತದೆ’ ಎಂದರು.

‘ಮಂಡ್ಯ ಜಿಲ್ಲೆ ಜೆಡಿಎಸ್‌ ಪಕ್ಷದ ತೆಕ್ಕೆಯಲ್ಲಿದೆ. ಜಿಲ್ಲೆಯಲ್ಲಿ ಎಲ್ಲ ಶಾಸಕರು ನಮ್ಮವರೇ ಇದ್ದಾರೆ. ಹೀಗಿರುವಾಗ ಸುಮಲತಾ ಸ್ಪರ್ಧಿಸಿದರೆ ನಮಗೆ ಯಾಕೆ ಭಯ. ಅವರು ಎಲ್ಲಿ‌ ಬೇಕಾದರೂ ಕಣಕ್ಕಿಳಿಯಬಹುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.

‘ಚುನಾವಣೆಯಲ್ಲಿ ಯಾವುದಾದರೂ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದು ಖಚಿತ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನೂ ಇದ್ದೆ. ಅಲ್ಲಿಗೆ ನಿಖಿಲ್ ಬಂದಿದ್ದರು.ಕಾರ್ಯಕರ್ತರ ಒತ್ತಾಯಕ್ಕೆ ಅವರು ಕೆಲವು ಮಾತುಗಳನ್ನು ಆಡಿದ್ದಾರೆ.ಮೈಸೂರಿನಲ್ಲಿ ಸ್ಪರ್ಧಿಸುವುದಾಗಿ ಹೇಳಿಲ್ಲ. ಜಿ.ಟಿ. ದೇವೇಗೌಡ ಕೂಡ ನಿಖಿಲ್ ಮೇಲಿನ ಅಭಿಮಾನದಿಂದ ಮಾತನಾಡಿದ್ದಾರೆ ಅಷ್ಟೆ’ ಎಂದು ಸಮರ್ಥಿಸಿದರು.

ಮಂಡ್ಯ, ಮೈಸೂರು, ಬೆಂಗಳೂರು ಉತ್ತರ ಮೇಲೆ ಸಿ.ಎಂ ಕಣ್ಣು

‘ಮೈತ್ರಿ’ಯ ಕೊಡುಗೆಯಾಗಿ, ಪಕ್ಷದ ಸಂಸದರಿರುವ ಮಂಡ್ಯದ ಜೊತೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ ಪಾಲಿಗೆ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಣ್ಣು ನೆಟ್ಟಿದ್ದಾರೆ.

ಚುನಾವಣೆ ದೃಷ್ಟಿಯಲ್ಲಿಟ್ಟು ಮಂಡ್ಯದಲ್ಲಿ ಕೋಟ್ಯಂತರ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಅದರ ಬೆನ್ನಿಗೆ, ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಮಹಾಲಕ್ಷ್ಮಿ ಲೇಔಟ್‌ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಅದ್ದೂರಿ ಕಾರ್ಯಕ್ರಮ, ನೂರಾರು ಕೋಟಿಗಳ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಮತಬ್ಯಾಂಕು ಗಟ್ಟಿಪಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆ

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನೇಕಾರ ಸಮುದಾಯದ ಬೆಳ್ಳಿಚುಕ್ಕಿ ವೀರೇಶ್, ಲಕ್ಷ್ಮೀಕಾಂತ್, ದೇವಿಕಾಬಾನು, ರೂಪಾ, ರಮೇಶ್ ಸೇರಿದಂತೆ 30ಕ್ಕೂ ಹೆಚ್ಚು ನಾಯಕರು ಕಾಂಗ್ರೆಸ್ ಸೇರಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಮಾತನಾಡಿ, ‘ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಹಿಂದುಳಿದ ವರ್ಗಗಳ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಸದ್ಯದಲ್ಲೇ ಇನ್ನಷ್ಟು ಮಂದಿ ಪಕ್ಷ ಸೇರಲಿದ್ದಾರೆ’ ಎಂದರು. ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಈ ವೇಳೆ ಇದ್ದರು.

ಕಾಂಗ್ರೆಸ್ ಅಭ್ಯರ್ಥಿ ಕಣಕ್ಕೆ: ಎಸ್.ಟಿ. ಸೋಮಶೇಖರ್

‘ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರಿದ್ದೇವೆ. ಹೀಗಾಗಿ, ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು’ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ.

‘ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಹೀಗಾಗಿ, ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು. ವಿಧಾನಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎನ್ನುವುದು ಸ್ಥಳೀಯ ಕಾರ್ಯಕರ್ತರ ಬೇಡಿಕೆಯೂ ಆಗಿದೆ’ ಎಂದರು.

* ಮೈಸೂರು ಕ್ಷೇತ್ರ ಜೆಡಿಎಸ್‌ಗೆ ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಸ್ಥಳೀಯ ಮುಖಂಡರು ಏನು ಬೇಕಾದರೂ ಹೇಳಿಕೊಳ್ಳಬಹುದು. ವರಿಷ್ಠರು ತೀರ್ಮಾನಿಸಬೇಕು
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

* ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೆಂದು ಪಕ್ಷದ ಕಾರ್ಯಕರ್ತರಿಂದ ತೀವ್ರ ಒತ್ತಡ ಇದೆ. ಮಂಡ್ಯ ಅಥವಾ ಬೇರೆ ಯಾವುದಾದರೂ ಕ್ಷೇತ್ರದಿಂದ ಅವರು ಕಣಕ್ಕಿಳಿಯುವುದು ನಿಶ್ಚಿತ
–ಎಚ್‌. ವಿಶ್ವನಾಥ್, ಜೆಡಿಎಸ್‌, ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.