ADVERTISEMENT

ಕೊಪ್ಪಳದಲ್ಲಿ ವಿದ್ಯಾರ್ಥಿಗಳ ಸಾವು: ಲೋಕಾಯುಕ್ತ ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:27 IST
Last Updated 22 ಆಗಸ್ಟ್ 2019, 20:27 IST

ಬೆಂಗಳೂರು: ಕೊಪ್ಪಳದ ದೇವರಾಜ ಅರಸು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿದಂತೆ 17 ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಲು ಲೋಕಾಯುಕ್ತ ಪಿ. ವಿಶ್ವನಾಥಶೆಟ್ಟಿ ಆದೇಶಿಸಿದ್ದಾರೆ.

ಕೊಪ್ಪಳದ ಡಿಎಸ್‌ಪಿ ನೀಡಿರುವ ವರದಿ ಆಧರಿಸಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಾರ್ಯದರ್ಶಿ, ಈ ಎರಡೂ ಇಲಾಖೆಗಳ ಆಯುಕ್ತರು, ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು, ಜಿಲ್ಲಾಧಿಕಾರಿ ಮತ್ತಿತರರಿಗೆ ನೋಟಿಸ್‌ ಜಾರಿ ಮಾಡಲು ನ್ಯಾ. ಶೆಟ್ಟಿ ಸೂಚಿಸಿದ್ದಾರೆ. ನೋಟಿಸ್‌ಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಹೇಳಲಾಗಿದೆ.

ವಿದ್ಯಾರ್ಥಿ ನಿಲಯದ ವಾರ್ಡನ್‌, ಕಟ್ಟಡ ಮಾಲೀಕರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಾಲೂಕು ವಿಸ್ತರಣಾ ಅಧಿಕಾರಿಗಳು, ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಾಣುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿ ಹಾಗೂ ಸುರಕ್ಷತೆ ಕುರಿತು ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ, ಎರಡೂ ಇಲಾಖೆಗಳ ಕಾರ್ಯದರ್ಶಿಗಳಿಗೆ ನಿರ್ದೇಶಿಸಲಾಗಿದೆ.

ವಿದ್ಯಾರ್ಥಿಗಳ ಪಾಲಕರ ಪರಿಸ್ಥಿತಿ ಕುರಿತು ವರದಿ ನೀಡುವಂತೆಯೂ ಜಿಲ್ಲಾಧಿಕಾರಿಗೆ ಕೇಳಲಾಗಿದೆ. ಮೃತಪಟ್ಟ ಮಕ್ಕಳಿಗೆ ನೀಡಿದ ಪರಿಹಾರದ ಹಣ ದುರ್ಬಳಕೆ ಆಗದಂತೆ ಬ್ಯಾಂಕ್‌ನಲ್ಲಿ ಠೇವಣಿ ಇಡಿಸುವಂತೆಯೂ ಲೋಕಾಯುಕ್ತರು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.