ADVERTISEMENT

Lokayukta Raid: ಐಎಎಸ್‌ ಅಧಿಕಾರಿ ಬಳಿ ₹ 9 ಕೋಟಿ ಆಸ್ತಿ

ಕೆ–ರೈಡ್‌ ವಿಶೇಷ ಉಪ ಆಯುಕ್ತೆ ಬಿ.ವಿ. ವಾಸಂತಿ ಅಮರ್‌ ಮನೆಯಲ್ಲಿ ಲೋಕಾಯುಕ್ತ ಪೊಲೀಸರ ಶೋಧ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 16:12 IST
Last Updated 23 ಜುಲೈ 2025, 16:12 IST
ವಾಸಂತಿ ಅಮರ್
ವಾಸಂತಿ ಅಮರ್   

ಬೆಂಗಳೂರು: ಕೆ–ರೈಡ್‌ ವಿಶೇಷ ಉಪ ಆಯುಕ್ತೆ ಬಿ.ವಿ. ವಾಸಂತಿ ಅಮರ್‌ ಅವರ ಮನೆಯಲ್ಲಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು ₹9.02 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. 

ವಾಸಂತಿ ಅವರೂ ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 8 ಅಧಿಕಾರಿಗಳ ಮನೆಗಳಲ್ಲಿ ಶೋಧ ನಡೆಸಿ, ಒಟ್ಟು ₹37.41 ಕೋಟಿಯಷ್ಟು ಮೌಲ್ಯದ ಸಂಪತ್ತನ್ನು ಪತ್ತೆ ಮಾಡಲಾಗಿದೆ. ಎಂಟೂ ಅಧಿಕಾರಿಗಳ ಪೈಕಿ ವಾಸಂತಿ ಅವರು ಹೊಂದಿರುವ ಆಸ್ತಿಯ ಮೌಲ್ಯವೇ ಅತಿಹೆಚ್ಚು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

‘ನಗರದ ಆರ್‌.ಟಿ.ನಗರದಲ್ಲಿ ವಾಸಂತಿ ಪ್ರಸ್ತುತ ವಾಸವಿರುವ ಮನೆ, ರಾಜ್ಯದ ವಿವಿಧೆಡೆ ಅವರ ಆಪ್ತರ ಮನೆಗಳು ಸೇರಿ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ. ಅವರ ಹೆಸರಿನಲ್ಲಿ ₹7.40 ಕೋಟಿ ಮೌಲ್ಯದ 4 ವಾಸದ ಮನೆಗಳು, ಮೂರು ನಿವೇಶನಗಳು ಮತ್ತು 3 ಎಕರೆ ಕೃಷಿ ಭೂಮಿ ಹೊಂದಿರುವುದು ಈ ವೇಳೆ ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ವಾಸಂತಿ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ಮೂರು ಕಾರುಗಳಿದ್ದು, ಅವುಗಳ ಈಗಿನ ಮಾರುಕಟ್ಟೆ ಮೌಲ್ಯ ₹90 ಲಕ್ಷದಷ್ಟಾಗುತ್ತದೆ. ಜತೆಗೆ ಅವರ ಮನೆಯಲ್ಲಿ ಒಟ್ಟು ₹12 ಲಕ್ಷ ಮೌಲ್ಯದ ಚಿನ್ನಾಭರಣಗಳು ಸಿಕ್ಕಿವೆ’ ಎಂದು ತಿಳಿಸಿದ್ದಾರೆ.

ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಆಗಿದ್ದಾಗ ಸರ್ಕಾರಿ ಜಮೀನೊಂದನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದಲ್ಲಿ ವಾಸಂತಿ ಅವರ ವಿರುದ್ಧ ಕಂದಾಯ ಇಲಾಖೆ ನೀಡಿದ್ದ ದೂರನ್ನು ಆಧರಿಸಿ, ಜುಲೈ 16ರಂದು ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಶೇಖು ಚವ್ಹಾಣ್ ಅವರ ಹುಬ್ಬಳ್ಳಿಯ ಮನೆಯಲ್ಲಿ ಸಿಕ್ಕ ನಗದು

ಒಂದೇ ಮನೆಯಲ್ಲಿ ₹52 ಲಕ್ಷ ನಗದು

ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಶೇಖು ಚವ್ಹಾಣ್ ಅವರ ಮನೆಯಲ್ಲಿ ಶೋಧದ ವೇಳೆ ₹52 ಲಕ್ಷದಷ್ಟು ನಗದು ಪತ್ತೆಯಾಗಿದೆ. ನಗದನ್ನು ಎಣಿಕೆ ಮಾಡಲೇ ಹಲವು ತಾಸು ಬೇಕಾಯಿತು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಬುಧವಾರ ಶೋಧ ನಡೆಸಲಾದ ಎಂಟು ಅಧಿಕಾರಿಗಳ ಪೈಕಿ ಅತ್ಯಂತ ಕಡಿಮೆ ಆಸ್ತಿ ಹೊಂದಿರುವುದ ಶೇಖು ಚವ್ಹಾಣ್ (ಒಟ್ಟು ₹2.47 ಕೋಟಿ). ಆದರೆ ಶೋಧದ ವೇಳೆ ಪತ್ತೆಯಾದ ₹81.89 ಲಕ್ಷದಷ್ಟು ನಗದಿನಲ್ಲಿ ಶೇಖು ಅವರದ್ದೇ ಸಿಂಹಪಾಲು’ ಎಂದಿದ್ದಾರೆ.  ಶೇಖು ಅವರಿಗೆ ಸೇರಿದ ಬ್ಯಾಂಕ್‌ ಖಾತೆಗಳು ಮತ್ತು ಲಾಕರ್‌ಗಳ ವಿವರ ದೊರೆತಿದ್ದು ಅವುಗಳಲ್ಲಿ ಏನೆಲ್ಲಾ ಇದೆ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

8 ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ಆಸ್ತಿ ಪತ್ತೆ

ಲೋಕಾಯುಕ್ತ ಪೊಲೀಸರು ಎಂಟು ಅಧಿಕಾರಿಗಳಿಗೆ ಸೇರಿದ ಒಟ್ಟು 41 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಸಂಬಂಧ ಈ ಎಲ್ಲ ಅಧಿಕಾರಿಗಳ ವಿರುದ್ಧ ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ₹26.36 ಕೋಟಿಎಂಟೂ ಅಧಿಕಾರಿಗಳ ಬಳಿ ಪತ್ತೆಯಾದ ಸ್ಥಿರಾಸ್ತಿಗಳ ಮೌಲ್ಯ ₹81.89 ಲಕ್ಷನಗದು₹4.85 ಕೋಟಿಚಿನ್ನಾಭರಣಗಳ ಮೌಲ್ಯ ₹2.57 ಕೋಟಿವಾಹನಗಳ ಮೌಲ್ಯ ₹2.81 ಕೋಟಿಗೃಹಬಳಕೆ ವಸ್ತುಗಳು ಬ್ಯಾಂಕ್ ಠೇವಣಿ ಮತ್ತು ಹೂಡಿಕೆಗಳ ಮೌಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.