ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 12 ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹24.34 ಕೋಟಿ ಮೌಲ್ಯದ ಸ್ಥಿರಾಸ್ತಿಗಳು ಸೇರಿ, ಒಟ್ಟು ₹38.10 ಕೋಟಿಯ ಸ್ವತ್ತುಗಳನ್ನು ಪತ್ತೆ ಮಾಡಿದ್ದಾರೆ.
ಈ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ‘ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ’ ದೂರಿನ ಆಧಾರದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬೀದರ್, ಉಡುಪಿ, ಬಾಗಲಕೋಟೆ ಮತ್ತು ಹಾಸನದ 48 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆಯೇ ಶೋಧ ನಡೆಸಿದ್ದರು.
ಹನ್ನೆರಡೂ ಅಧಿಕಾರಿಗಳು, ತಮ್ಮ ಕುಟುಂಬದವರು ಮತ್ತು ಆಪ್ತರ ಹೆಸರಿನಲ್ಲಿ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಈ ಪೈಕಿ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶಕಿ ಹುದ್ದೆಯಲ್ಲಿದ್ದಾಗ ಅಮಾನತಾಗಿದ್ದ ವಿ.ಸುಮಂಗಲ ಅವರು ಅತಿಹೆಚ್ಚು ಮೌಲ್ಯದ ಆಸ್ತಿ (₹7.32 ಕೋಟಿ) ಹೊಂದಿದ್ದಾರೆ.
ಸುಮಂಗಲ ಅವರಿಗೆ ಸೇರಿದ ಆರು ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹5.08 ಕೋಟಿ ಮೌಲ್ಯದ 4 ನಿವೇಶನಗಳು, 5 ವಾಸದ ಮನೆ, 19 ಎಕರೆ ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಪತ್ತೆ ಮಾಡಿದ್ದಾರೆ. ಸುಮಂಗಲ ಅವರು ಹೊಂದಿರುವ ವಾಹನಗಳು, ಚಿನ್ನಾಭರಣ, ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ ಮೌಲ್ಯವೇ ₹2.24 ಕೋಟಿಯಷ್ಟಾಗುತ್ತದೆ. ಶಾಲಾ ಶಿಕ್ಷಣ ಇಲಾಖೆಯು ಕರೆದಿದ್ದ ₹1.62 ಕೋಟಿ ಮೊತ್ತದ ಟೆಂಡರ್‌ನಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಅವರನ್ನು 2024ರ ಜುಲೈನಲ್ಲಿ ಅಮಾನತು ಮಾಡಲಾಗಿತ್ತು.
ತೋಟಗಾರಿಕಾ ಇಲಾಖೆಯ ಔರಾದ್ (ಬೀದರ್ ಜಿಲ್ಲೆ) ಸಹಾಯಕ ನಿರ್ದೇಶಕ ಧೂಳಪ್ಪ ಅವರ ಮನೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ₹500ರ ಮುಖಬೆಲೆಯ ತಲಾ ನೂರು ನೋಟುಗಳಿರುವ 166 ಕಟ್ಟುಗಳು ಪತ್ತೆಯಾಗಿವೆ. ನೋಟು ಎಣಿಸುವ ಯಂತ್ರದ ಜತೆಗೆ, ನಾಲ್ವರು ಸಿಬ್ಬಂದಿ ಈ ನೋಟುಗಳನ್ನು ಲೆಕ್ಕಾಚಾರ ಮಾಡಿದ್ದಾರೆ. ಧೂಳಪ್ಪ ಅವರ ಮನೆಯಲ್ಲಿ ಒಟ್ಟು ₹83.09 ಲಕ್ಷ ನಗದು ಪತ್ತೆಯಾಗಿದೆ. ಒಟ್ಟಾರೆ ಹನ್ನೆರಡೂ ಅಧಿಕಾರಿಗಳ ಮನೆಗಳಲ್ಲಿ ₹1.20 ಕೋಟಿಯಷ್ಟು ನಗದು ದೊರೆತಿದೆ.
ಈ ಎಲ್ಲ ಅಧಿಕಾರಿಗಳ ಬಳಿ ಹತ್ತಾರು ಸಾವಿರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಗಳಿಂದ ಆರಂಭವಾಗಿ ₹40 ಲಕ್ಷ–₹50 ಲಕ್ಷದ ಐಷಾರಾಮಿ ಎಸ್‌ಯುವಿಗಳು ಪತ್ತೆಯಾಗಿವೆ. ಈ ಎಲ್ಲ ವಾಹನಗಳ ಮೌಲ್ಯ ₹3.20 ಕೋಟಿಯಷ್ಟಾಗುತ್ತದೆ. ಎಲ್ಲ ಅಧಿಕಾರಿಗಳ ಮನೆಗಳಲ್ಲಿ ದೊರೆತಿರುವ ಆಸ್ತಿ ಪತ್ರಗಳು, ಚರಾಸ್ತಿಗಳು ಮತ್ತು ನಗದಿನ ಮಹಜರು ನಡೆಸಿದ್ದು, ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಎಂದು ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಗೋದಾಮಿನಲ್ಲಿ ಸಂಗ್ರಹಿಸಲಾಗಿರುವ ಅಕ್ಕಿ ಮತ್ತು ಗೋಧಿಗೆ ಹುಳು ಬಿದ್ದಿದೆ
ಅಕ್ರಮ ಆಸ್ತಿ ಮತ್ತು ನಗದನ್ನು ನಿರೀಕ್ಷಿಸಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರಿಗೆ ಪಡಿತರ ವಿತರಣೆಗಾಗಿ ಮೀಸಲಾಗಿದ್ದ ನೂರಾರು ಟನ್‌ಗಳಷ್ಟು ಕೊಳೆತ ಅಕ್ಕಿ ಮತ್ತು ಗೋಧಿ ಸಿಕ್ಕಿದೆ. ‘ಆಹಾರ ನಿಗಮದ ದಾವಣಗೆರೆ ಜಿಲ್ಲೆಯ ಕಿರಿಯ ಎಂಜಿನಿಯರ್ ಬಿ.ಎಸ್.ನಡುವಿನಮನೆ ಅವರ ಮನೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಅವರ ಸುಪರ್ದಿಯಲ್ಲಿರುವ ಗೋದಾಮಿನ ಮೇಲೂ ದಾಳಿ ನಡೆಸಿ ಅದರ ಬಾಗಿಲನ್ನು ತೆರೆದಾಗ ಕಮಟು ವಾಸನೆ ಬಡಿಯುತ್ತಿತ್ತು’ ಎಂದು ಲೋಕಾಯುಕ್ತ ಪೊಲೀಸರ ಮೂಲಗಳು ತಿಳಿಸಿವೆ. ‘ಅಲ್ಲಿ ಸಾವಿರಾರು ಚೀಲ ಅಕ್ಕಿ ಮತ್ತು ಗೋಧಿ ಕೊಳೆತಿತ್ತು. ಅವುಗಳಿಗೆ ಬಿದ್ದಿದ್ದ ಹುಳುಗಳು ಚೀಲಗಳ ಮೇಲೆಲ್ಲಾ ಓಡಾಡುತ್ತಿದ್ದವು. ಇಲಿ–ಹೆಗ್ಗಣಗಳು ಮೂತ್ರ ಮತ್ತು ಹಿಕ್ಕೆ ಮಾಡಿದ್ದವು. ಇಡೀ ಗೋದಾಮಿನಲ್ಲಿದ್ದ ಪಡಿತರ ಹಾಳಾಗಿತ್ತು’ ಎಂದು ಮಾಹಿತಿ ನೀಡಿವೆ. ‘ಈ ಬಗ್ಗೆ ವಿವರಣೆ ಕೇಳಿದಾಗ ಪಡಿತರ ಯೋಜನೆ ಅಡಿ ಹಾಗೂ ವಿವಿಧ ವಸತಿನಿಲಯಗಳಿಗೆ ವಿತರಿಸಲು ಅಕ್ಕಿ ಹಾಗೂ ಗೋಧಿಯನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದು 2500 ಟನ್ ಸಾಮರ್ಥ್ಯದ ಗೋದಾಮು. 2023ರಿಂದಲೂ ಈ ದಾಸ್ತಾನು ಇಲ್ಲಿಯೇ ಇದೆ. ಎಷ್ಟು ಪ್ರಮಾಣದ ಅಕ್ಕಿ ಮತ್ತು ಗೋಧಿ ಹಾಳಾಗಿದೆ ಎಂಬುದರ ಮಾಹಿತಿ ದೊರೆತಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಸಂಬಂಧಿತ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.