ನವದೆಹಲಿ: ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಲ್ಲಿ ವಿವರಣೆ ಕೇಳಿದರು.
ರಾಜ್ಯ ಘಟಕದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಮೋದಿ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚಿಸಿದರು. ಪಕ್ಷದ ಸಂಘಟನಾ ಚಟುವಟಿಕೆಗಳ ಕುರಿತು ವಿಜಯೇಂದ್ರ ಮಾಹಿತಿ ನೀಡಿದರು.
ಈ ವೇಳೆ ಮೋದಿ ಅವರು, ‘ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ನೀಡಲಾಗಿತ್ತು. ಅಲ್ಲದೇ, ಚನ್ನಪಟ್ಟಣ ಹಾಗೂ ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಕಣಕ್ಕಿಳಿಸಲಾಗಿತ್ತು. ಆದರೂ, ಸೋತಿದ್ದೇವೆ. ರಾಜ್ಯ ನಾಯಕರು ಸಂಘಟಿತರಾಗಿ ಪ್ರಚಾರ ನಡೆಸಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
‘ಮೋದಿ ಅವರ ಭೇಟಿಯ ಅಪೂರ್ವ ಕ್ಷಣಗಳು ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ದೊರೆತ ಪ್ರೇರಣೆಯ ಕಿರಣಗಳು’ ಎಂದು ವಿಜಯೇಂದ್ರ ‘ಎಕ್ಸ್’ ಮಾಡಿದ್ದಾರೆ.
‘ಅವರ ಕಾರ್ಯಶೈಲಿ ನಮ್ಮಂಥ ಕಾರ್ಯಕರ್ತರಿಗೆ ನಿತ್ಯ ಚೈತನ್ಯದ ಚಿಲುಮೆಯಾಗಿದೆ. ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ಅದಮ್ಯ ಉತ್ಸಾಹ ಬಂದಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಹಾಗೂ ಪಕ್ಷದ ಕಾರ್ಯಕರ್ತರು ಯೋಜಿತವಾಗಿ ತೊಡಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸಬೇಕೆಂದು ಪ್ರಧಾನಿ ಸೂಚಿಸಿದರು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.