ADVERTISEMENT

ರೈತರು, ವಿದ್ಯಾರ್ಥಿಗಳು, ದಲಿತರಿಗೆ ಚೊಂಬು: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 14:36 IST
Last Updated 21 ಏಪ್ರಿಲ್ 2024, 14:36 IST
ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದೂ ಅಲ್ಲದೇ, ಬಿಜೆಪಿ ಸರ್ಕಾರದ ರೈತ, ವಿದ್ಯಾರ್ಥಿ ಮತ್ತು ದಲಿತರ ಯೋಜನೆಗಳನ್ನು ಕಡಿತ ಮಾಡಿ ಜನರಿಗೆ ಚೊಂಬು ಕೊಟ್ಟಿರುವುದು ಕಾಂಗ್ರೆಸ್‌ ಸರ್ಕಾರದ ಹೆಗ್ಗಳಿಕೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಶಾಶ್ವತ ಯೋಜನೆಗಳನ್ನು ಕೊಟ್ಟಿದ್ದಾರೆ. ಈ ಮೂಲಕ ಮೋದಿಯವರು ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದರು.

‘ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ ಯೋಜನೆ ಜತೆಗೆ ರಾಜ್ಯ ಸರ್ಕಾರ ರೈತರಿಗೆ ₹4,000 ನೀಡುತ್ತಿತ್ತು. ರಾಜ್ಯ ಸರ್ಕಾರ ಅದನ್ನು ಕಡಿತ ಮಾಡಿ ರೈತರಿಗೆ ಚೊಂಬು ಕೊಟ್ಟಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 13 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಲಾಗಿತ್ತು. ಅದನ್ನು ನಿಲ್ಲಿಸಿದ್ದಾರೆ. ದಲಿತ ವರ್ಗಕ್ಕೆ ಮೀಸಲಿಟ್ಟಿದ್ದ ಎಸ್‌ಸಿಪಿ ಟಿಎಸ್‌ಪಿಯ ₹11,380 ಕೋಟಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಹೀಗೆ ರಾಜ್ಯದ ಜನರಿಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ’ ಎಂದು ಹರಿಹಾಯ್ದರು.

ADVERTISEMENT

ಮೋದಿದು ಅಕ್ಷಯ ಪಾತ್ರೆ: ‘ಮೋದಿಯವರು ಶಾಶ್ವತ ಯೋಜನೆಗಳ ಮೂಲಕ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದಾರೆ. ರಾಜ್ಯದಲ್ಲಿ ಆರು ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಅನುದಾನ ನೀಡಿದ್ದಾರೆ. 9 ಲಕ್ಷ ಮನೆಗಳಿಗೆ ಉಜ್ವಲ ಗ್ಯಾಸ್‌ ಸಂಪರ್ಕ ನೀಡಿದ್ದಾರೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 4 ಲಕ್ಷ ಮನೆ, 12 ಲಕ್ಷ ಶೌಚಾಲಯ, ಕೋವಿಡ್‌ ಸಂದರ್ಭದಲ್ಲಿ ಉಚಿತವಾಗಿ 10 ಕೆ.ಜಿ.ಅಕ್ಕಿ ಕೊಟ್ಟಿದ್ದು ನರೇಂದ್ರ ಮೋದಿ. ಕಾಂಗ್ರೆಸ್‌ ಸರ್ಕಾರ ಒಂದು ಕಾಳು ಅಕ್ಕಿ ಕೊಟ್ಟಿಲ್ಲ. ಇದನ್ನು ಕಾಂಗ್ರೆಸ್‌ ಚೊಂಬಿಗೆ ಸೇರಿಸಿಕೊಳ್ಳಲಿ’ ಎಂದರು.

ಯುಪಿಎ ಅವಧಿಯಲ್ಲಿ (2004–14) ₹81,795 ಕೋಟಿ ತೆರಿಗೆ ಪಾಲಿನ ಹಣ ಬಂದಿದೆ. ಎನ್‌ಡಿಎ ಅವಧಿಯಲ್ಲಿ( 2014-2024) ₹2.82 ಲಕ್ಷ ಕೋಟಿ  ರಾಜ್ಯಕ್ಕೆ ಬಂದಿದೆ. ಯುಪಿಎ ಅವಧಿಯಲ್ಲಿ ಕೇಂದ್ರದ ಅನುದಾನ ₹60,799 ಕೋಟಿ ಬಂದಿದೆ. ಮೋದಿ ಅವಧಿಯಲ್ಲಿ ₹2.33 ಲಕ್ಷ ಕೋಟಿ ಅನುದಾನ ಬಂದಿದೆ. ಹಾಗಿದ್ದರೆ ಚೊಂಬು ಕೊಟ್ಟಿದ್ದು ಯಾರು? ಕಾಂಗ್ರೆಸ್ಸಾ? ಬಿಜೆಪಿಯಾ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.