ADVERTISEMENT

ಮದರಸಾ ವಿವಾದ: ಮೈಸೂರು ಜಿಲ್ಲಾಧಿಕಾರಿಗೆ ಹೈಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 16:12 IST
Last Updated 18 ಮಾರ್ಚ್ 2025, 16:12 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೈಸೂರು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಲೀಂ ಸಾದಿಯಾ ಮದರಸಾವನ್ನು ಮಸೀದಿಯಾಗಿ ಪರಿವರ್ತಿಸುವ ಚಟುವಟಿಕೆ ನಡೆಯುತ್ತಿವೆ ಎಂಬ ಆರೋಪಕ್ಕೆ ಸಂಬಂಧಿಸಿ ದಶಕಗಳಿಂದ ಮುಂದುವರಿದಿರುವ ವಿವಾದವನ್ನು ಬಗೆಹರಿಸಲು ಹೋದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಕಾರಣ ಮುಂದೊಡ್ಡಿ ಸಮಸ್ಯೆ ಪರಿಹರಿಸದೇ ಇರುವ ನಿಮ್ಮ ನಡೆ ಒಪ್ಪತಕ್ಕದ್ದಲ್ಲ’ ಎಂದು ಹೈಕೋರ್ಟ್‌ ಮೈಸೂರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ.

‘ಮಸ್ಜಿದ್‌ ಎ ಸಿದ್ದಿಖಿ ಅಕ್ಬರ್‌ ಟ್ರಸ್ಟ್‌ ಸಲ್ಲಿಸುವ ಮನವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನೀಡಿರುವ ಆದೇಶ ಪಾಲನೆ ಮಾಡಲು ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿ ಗಾಯತ್ರಿಪುರಂ ಎರಡನೇ ಹಂತದಲ್ಲಿರುವ ಹಲೀಂ ಸಾದಿಯಾ ಶೈಕ್ಷಣಿಕ ಸಂಸ್ಥೆ ಮತ್ತು ಮಸ್ಜಿದ್‌ ಎ ಸಿದ್ದಿಖಿ ಅಕ್ಬರ್‌ ಟ್ರಸ್ಟ್‌ನ ಅಧಿಕೃತ ಪ್ರತಿನಿಧಿ ಮುನಾವರ್‌ ಪಾಶ ಬಿನ್‌ ಅಬ್ದುಲ್‌ ವಹೀದ್‌ ಅವರು ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಮೊಹಮದ್‌ ತಾಹೀರ್‌, ‘ಸರ್ಕಾರ ಸಬೂಬು ಹೇಳಿ ಬೇಕೆಂದೇ ಸಮಸ್ಯೆ ಬಗೆಹರಿಸುವ ಮನಸ್ಸು ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ಇದನ್ನು ಅಲ್ಲಗಳೆದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ.ಎಸ್.ಪ್ರದೀಪ್‌ ಮತ್ತು ಸರ್ಕಾರದ ಪರ ವಕೀಲೆ ಬಿ.ಜಿ.ನಮಿತಾ ಮಹೇಶ್‌, ‘ಇದೊಂದು ದಶಕಗಳಿಂದ ನನೆಗುದಿಗೆ ಬಿದ್ದಿರುವ ವಿಷಯ. ಇದಕ್ಕೆ ಸಂಬಂಧಿಸಿ ನಡೆದ ಗಲಾಟೆ, ಗಲಭೆಗಳು ಮತ್ತು ಅಪರಾಧಿಕ ಕೃತ್ಯಗಳಲ್ಲಿ ಈತನಕ ಕನಿಷ್ಠ 10 ಜನ ಬಲಿಯಾಗಿದ್ದಾರೆ. ಗಂಭೀರವಾದ 64 ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ’ ಎಂದು ವಸ್ತುಸ್ಥಿತಿಯನ್ನು ನ್ಯಾಯಪೀಠಕ್ಕೆ ಸವಿವರವಾಗಿ ಅರುಹಿದರು.

ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯಲ್ಲಿ ಖುದ್ದು ಹಾಜರಿದ್ದ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಮತ್ತು ಮೈಸೂರು ನಗರ ಪೊಲೀಸ್ ಎಸಿಪಿ ಕೆ.ರಾಜೇಂದ್ರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

‘ಯಥಾಸ್ಥಿತಿ ಕಾಪಾಡುವ ಆದೇಶವನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವುದಾದರೆ ನೀವು ಇರುವುದಾದರೂ ಯಾತಕ್ಕೆ? ಕಾನೂನು ಸುವ್ಯವಸ್ಥೆ ಪಾಲಿಸಲು ಕಷ್ಟ ಎನ್ನುವ ನೀವು ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಇಂತಹ ಸಮಸ್ಯೆ ಬಗೆಹರಿಸಲಿಲ್ಲ ಎಂದರೆ ಇನ್ಯಾವ ಜಿಲ್ಲೆಯ ಸಮಸ್ಯೆ ಬಗೆಹರಿಸಬಲ್ಲಿರಿ? ಜಿಲ್ಲಾಧಿಕಾರಿ ಹುದ್ದೆ ಎಂದರೆ ಅದೇನು ಎಂಜಾಯ್‌ ಮಾಡುವುದಕ್ಕೆ ಇದೆಯಾ?’ ಎಂದು ಕಿಡಿ ಕಾರಿತು.

ಇದಕ್ಕೆ ಲಕ್ಷ್ಮಿಕಾಂತ ಅವರು, ‘ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎಂದು ಸಮಜಾಯಿಷಿ ನೀಡಿದರು. ಈ ಮಾತಿಗೆ ದನಿಗೂಡಿಸಿದ ಪ್ರದೀಪ್‌, ‘ಶಾಂತಿಸಭೆ ನಡೆಸಿದರೆ ಸಭೆಯಲ್ಲಿ ಭಾಗವಹಿಸಿದವರನ್ನು ಗುರಿ ಮಾಡಲಾಗುತ್ತದೆ. ಹತ್ಯೆಗಳು ನಡೆಯುತ್ತವೆ. ಇದರಲ್ಲಿ ಎರಡೂ ಕೋಮಿನ ಜನರಿಗೂ ಅಪಾಯ ಇದೆ’ ಎಂಬ ಆತಂಕ ವ್ಯಕ್ತಪಡಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕೂಡಲೇ ಶಾಂತಿಸಭೆ ನಡೆಸಿ ಮುಂದಿನ ವಿಚಾರಣೆಯಲ್ಲಿ ಅದರ ವರದಿ ಸಲ್ಲಿಸಿ’ ಎಂದು ತಾಕೀತು ಮಾಡಿ ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಿತು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.