ADVERTISEMENT

ಕೇರಳ ಲಾಟರಿ: ಮದ್ದೂರು ಯುವಕನಿಗೆ ₹ 1 ಕೋಟಿ ಬಹುಮಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 14:09 IST
Last Updated 9 ಫೆಬ್ರುವರಿ 2021, 14:09 IST
ಸೋಹನ್‌ ಬಲರಾಂ
ಸೋಹನ್‌ ಬಲರಾಂ   

ಮಂಡ್ಯ: ಕೇರಳದಲ್ಲಿ ಲಾಟರಿ ಟಿಕೆಟ್‌ ಖರೀದಿಸಿದ ಮದ್ದೂರು ತಾಲ್ಲೂಕು, ಸೋಮನಹಳ್ಳಿ ಗ್ರಾಮದ ಯುವಕನೊಬ್ಬನಿಗೆ ₹ 1 ಕೋಟಿ ಬಹುಮಾನ ಬಂದಿರುವುದು ಕುತೂಹಲ ಮೂಡಿಸಿದೆ.

ಸೋಮನಹಳ್ಳಿಯ ಸೋಹನ್‌ ಬಲರಾಮ್‌ ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನನ್ನು ಭೇಟಿಯಾಗಲು ಕೇರಳದ ಮಲಪ್ಪುರಂ ಜಿಲ್ಲೆಯ ಪುಥನಾಥಿನಿ ಪಟ್ಟಣಕ್ಕೆ ತೆರಳಿದ್ದರು. ಸ್ನೇಹಿತನ ಒತ್ತಾಯದ ಮೇರೆಗೆ ಸೋಹನ್‌, ಭಾಗ್ಯಧರ ಲಾಟರಿ ಏಜೆನ್ಸಿ ಅಂಗಡಿಯಲ್ಲಿ ₹ 100 ನೀಡಿ ಟಿಕೆಟ್‌ ಖರೀದಿ ಮಾಡಿದ್ದರು. ಕಳೆದ ಭಾನುವಾರ (ಫೆ. 7) ಫಲಿತಾಂಶ ಪ್ರಕಟವಾಗಿದ್ದು ಸೋಹನ್‌ಗೆ ₹ 1 ಕೋಟಿ ಬಹುಮಾನ ಬಂದಿದೆ. ಈ ವಿಚಾರವನ್ನು ಸ್ವತಃ ಸೋಹನ್‌ ದೃಢಪಡಿಸಿದ್ದಾರೆ.

ಕೇರಳದಿಂದ ಬೆಂಗಳೂರಿನತ್ತ ವಾಪಸ್‌ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಲಾಟರಿ ಏಜೆನ್ಸಿಯಿಂದ ಕರೆ ಬಂದಿದೆ. ಬಹುಮಾನ ಬಂದಿರುವ ವಿಚಾರ ತಿಳಿದ ನಂತರ ಸೋಹನ್‌ ಹಿಂದಿರುಗಿ ಪುಥನಾಥಿಗೆ ತೆರಳಿದ್ದಾರೆ.

ADVERTISEMENT

‘ನನ್ನ ಗೆಳೆಯನ ಕುಟುಂಬದಲ್ಲಿ ಮದುವೆ ಇದ್ದ ಕಾರಣ ಕೇರಳಕ್ಕೆ ತೆರಳಿದ್ದೆ. ಊಟಕ್ಕೆ ತೆರಳಿದ್ದಾಗ ಅಲ್ಲಿ ಲಾಟರಿ ಏಜೆಂಟರೊಬ್ಬರು ಬಂದಿದ್ದರು. ನನ್ನ ಗೆಳೆಯ ಟಿಕೆಟ್‌ ಕೊಳ್ಳುವಂತೆ ಒತ್ತಾಯಿಸಿದರು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಲಾಟರಿ ಟಿಕೆಟ್‌ ಖರೀದಿಸಿದೆ. ಬಹುಮಾನ ಬಂದಿದೆ ಎಂದಾಗ ನಂಬಲಾಗಲಿಲ್ಲ, ಬಹುಮಾನದ ವಿವರ ಕಳುಹಿಸಿದಾಗ ನಂಬಿದೆ, ಬಹಳ ಸಂತೋಷವಾಗಿದೆ’ ಎಂದು ಸೋಹನ್‌ ತಿಳಿಸಿದರು.

ಮನೆಯಲ್ಲಿ ಸಂಭ್ರಮ: ಸೋಹನ್‌ಗೆ ಬಂಪರ್‌ ಬಹುಮಾನ ಬಂದಿರುವ ವಿಷಯ ತಿಳಿದ ನಂತರ ಸೋಮನಹಳ್ಳಿಯ ಅವರ ಕುಟುಂಬ ಸದಸ್ಯರು ಸಿಹಿ ಹಂಚಿ, ಸಂಭ್ರಮ ಆಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.