ADVERTISEMENT

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಧುಕರ್‌ ಶೆಟ್ಟಿ ನೆನಪಿನ ಬಂಡಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 7:14 IST
Last Updated 29 ಡಿಸೆಂಬರ್ 2018, 7:14 IST
ಮಧುಕರ್‌ ಶೆಟ್ಟಿ
ಮಧುಕರ್‌ ಶೆಟ್ಟಿ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಐಪಿಎಸ್‌ ಅಧಿಕಾರಿ ಮಧುಕರಶೆಟ್ಟಿ ಅವರು ವಿಶಿಷ್ಟ ಕಾರ್ಯವೈಖರಿ ಮೂಲಕ ಜಿಲ್ಲೆಯ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.

2005ರ ಆಗಸ್ಟ್‌ 24ರಿಂದ 2006ರ ಏಪ್ರಿಲ್‌ 28ರವರೆಗೆ ಇಲ್ಲಿ ಕಾರ್ಯನಿರ್ವಹಿಸಿದ್ದರು. ಇಲ್ಲಿದ್ದ ಎಂಟು ತಿಂಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

‘ಮಟ್ಕಾ ದಂಧೆ, ಪುಂಡಾಟಿಕೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಮದ್ಯದಂಗಡಿಗಳು ನಿತ್ಯ ಸಮಯಕ್ಕೆ ಸರಿಯಾಗಿ ಮುಚ್ಚುವಂತೆ ಮಾಡಿದ್ದರು. ಖಡಕ್‌ ಆಗಿದ್ದರು’ ಎಂದು ಪೊಲೀಸ್‌ ಕಾನ್‌ಸ್ಟೆಬಲ್ವೊಬ್ಬರು ‘ಪ್ರಜಾವಾಣಿ’ಯೊಂದಿಗೆ ನೆನಪಿನ ಬುತ್ತಿ ಹಂಚಿಕೊಂಡರು.

ADVERTISEMENT

‘ಸರಳ ಜೀವನ ನಡೆಸುತ್ತಿದ್ದರು. ವೈಯುಕ್ತಿಕ ಕೆಲಸಕ್ಕೆ ಸರ್ಕಾರಿ ವಾಹನ ಬಳಸುತ್ತಿರಲಿಲ್ಲ. ಐದಾರು ಜತೆ ಉಡುಪು, ಒಂದು ದಿವಾನ್‌ ಮಂಚ, ಕುರ್ಚಿ ಇದ್ದವು. ಬಡವರ ಬಗ್ಗೆ ಬಹಳ ಕಾಳಜಿ ಇತ್ತು, ಸಹಾಯ ಮಾಡುತ್ತಿದ್ದರು. ಪೊಲೀಸರ ಬಗ್ಗೆ ಪ್ರೀತಿ ಇತ್ತು, ತಪ್ಪು ಮಾಡಿದವರಿಗೆ ಕ್ರಮ ಜರುಗಿಸುತ್ತಿದ್ದರು. ಅವರಿಗೆ ಸರಿಸಾಟಿಯೇ ಇಲ್ಲ’ ಎಂದು ಕಾನ್‌ಸ್ಟೆಬಲ್‌ ಕಣ್ಣೀರಾದರು.

ಮಧುಕರ ಶೆಟ್ಟಿ ಇಲ್ಲಿ ಎಸ್ಪಿ ಆಗಿದ್ದಾಗ ಐಎಎಸ್‌ ಅಧಿಕಾರಿ ಹರ್ಷಗುಪ್ತ ಜಿಲ್ಲಾಧಿಕಾರಿಯಾಗಿದ್ದರು. ಈ ಜೋಡಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಈ ಜೋಡಿಯು ಕಾರ್ಯಕ್ಷಮತೆಯಿಂದ ಒತ್ತುವರಿ ಜಾಗ ತೆರವುಗೊಳಿಸಿ ವಸತಿ ಕಲ್ಪಿಸಿದ ಜಾಗಕ್ಕೆ ‘ಗುಪ್ತಶೆಟ್ಟಿಹಳ್ಳಿ’ ಎಂದು ನಾಮಕರಣ ಮಾಡಲಾಗಿದೆ.

‘ಅವರೊಬ್ಬ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿ. ಅಂಥ ಮತ್ತೊಬ್ಬ ಪೊಲೀಸ್‌ ಅಧಿಕಾರಿಯನ್ನು ಕಂಡಿಲ್ಲ. ಅರಣ್ಯ ಒತ್ತುವರಿ ವಿಚಾರದಲ್ಲಿ ಜಾಗ ಕಳೆದುಕೊಂಡಿದ್ದ ಸಾರಗೋಡು ಅರಣ್ಯ ಪ್ರದೇಶದ ದಲಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು’ ಎಂದು ಸಿಪಿಐಎಂಲ್‌ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ನೆನಪಿಸಿಕೊಂಡರು.

‘ಆಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಬಳಿ ಒತ್ತುವರಿ ತೆರವುಗೊಳಿಸಿ ಜಾಗ ಕಲ್ಪಿಸಿದರು. ಕುಡಿಯುವ ನೀರು, ರಸ್ತೆ ಮೂಲಸೌಕರ್ಯಕ್ಕೆ ಎಸ್ಪಿ, ಜಿಲ್ಲಾಧಿಕಾರಿ ಕ್ರಮ ವಹಿಸಿದರು. ಹೀಗಾಗಿ ಇಲ್ಲಿಗೆ ‘ಗುಪ್ತಶೆಟ್ಟಿಹಳ್ಳಿ’ ಎಂದು ನಾಮಕರಣ ಮಾಡಲಾಯಿತು’ ಎಂದು ತಿಳಿಸಿದರು.

‘ಹಿರೇಗೌಜ ಗ್ರಾಮದ ಬಳಲಿಕಮ್ಮ ದೇವಾಲಯಕ್ಕೆ ದಲಿತರಿಗೆ ಪ್ರವೇಶವಿಲ್ಲ ಎಂಬ ಕಾರಣಕ್ಕೆ ಎರಡು ಕೋಮಿನ ನಡುವೆ ವೈಷಮ್ಯ ಬೆಳೆದಿತ್ತು. ಆಗ ಗ್ರಾಮಕ್ಕೆ ಬಂದಿದ್ದರು. ನಮ್ಮೂರ ಸಮುದಾಯ ಭವನದ ಮುಂದೆ ಅವರಿಗೆ ಕುಳಿತುಕೊಳ್ಳಲು ಇಟ್ಟಿದ್ದ ಕುರ್ಚಿ ತೆಗೆಸಿ ನಮ್ಮೊಂದಿಗೆ ನೆಲದ ಮೇಲೆಯೆ ಕುಳಿತರು. ದಲಿತ ಕಾಲೋನಿಗಳ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದರು. ಎರಡು ಕೋಮಿನವರನ್ನು ಕರೆಸಿದ್ದರು.‘ದೇವಸ್ಥಾನಕ್ಕೆ ಹೋಗಲು ದೊಣ್ಣೆ ನಾಯಕರ ಅಪ್ಪಣೆ ಬೇಕೇನ್ರಿ. ನಾಡಿದ್ದು ಪೂಜೆಗೆ ಸಿದ್ಧತೆ ಮಾಡಿಕೊಳ್ಳಿ ದಲಿತರ ಜೊತೆ ದೇವಸ್ಥಾನಕ್ಕೆ ಬರುತ್ತೇನೆ. ತಡೆಯೋರು ಯಾರಾದ್ರು ಇದ್ರೆ ಅವತ್ತು ಮುಂದೆ ಬನ್ನಿ’ ಅಂತ ಖಡಕ್ಕಾಗಿ ಹೇಳುವ ಮೂಲಕ ನಮಗೆ ಪರಿಚಿತರಾಗಿದ್ದರು. ಗ್ರಾಮದಲ್ಲಿ ಸೌಹಾರ್ದ ಮೂಡಿಸಿದ್ದರು. ನಂತರ ಅವರು ಚಿಕ್ಕಮಗಳೂರಿನಲ್ಲಿ ಇರುವ ತನಕ ಪ್ರತಿ ವಾರ ಪೊಲೀಸ್ ಸಿಬ್ಬಂದಿ ಒಬ್ಬರು ನಮ್ಮೂರ ಕಾಲೋನಿಗೆ ಬಂದು ಸ್ವಚ್ಛತಾ ಕಾರ್ಯಕ್ರಮ ಮಾಡಿಸುತ್ತಿದ್ದರು’ ಎಂದು ಗ್ರಾಮದ ಶಿವು ನೆನಪಿಸಿಕೊಂಡರು.

ಮಧುಕರಶೆಟ್ಟಿ ಅವರ ಇಂಥ ಹಲವಾರು ಕೆಲಸಗಳನ್ನು ಅವರನ್ನು ಜನಮನದಲ್ಲಿ ಅಚ್ಚಳಿಯದೇ ಉಳಿಸಿವೆ. ಅವರ ಅಕಾಲಿಕ ಸಾವಿನಿಂದ ಜನರಲ್ಲಿ ದುಃಖ ಮಡುಗಟ್ಟಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.