ADVERTISEMENT

ಕೊಡಗು ಪ್ರವಾಹ: ನೋವು ಮರೆತು ಸ್ವಾವಲಂಬನೆಯತ್ತ ಹೆಜ್ಜೆ

ಸಂಕಷ್ಟಕ್ಕೆ ಒಳಗಾದ ಕಾಲೂರು ಗ್ರಾಮದ ಮಹಿಳೆಯರಲ್ಲಿ ಭರವಸೆಯ ಬೆಳಕು

ಅದಿತ್ಯ ಕೆ.ಎ.
Published 13 ನವೆಂಬರ್ 2018, 4:52 IST
Last Updated 13 ನವೆಂಬರ್ 2018, 4:52 IST
   

ಮಡಿಕೇರಿ: ಭೂಕುಸಿತ, ಪ್ರವಾಹದಿಂದ ತತ್ತರಿಸಿದ್ದತಾಲ್ಲೂಕಿನ ಕಾಲೂರಿನ ಗ್ರಾಮದ ಮಹಿಳೆಯರು ಅಲ್ಪ ಅವಧಿಯಲ್ಲೇ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ಆಗಸ್ಟ್‌ನಲ್ಲಿ ಸುರಿದಿದ್ದ ಮಹಾಮಳೆ ಇಲ್ಲೂ ಗ್ರಾಮಸ್ಥರ ಬದುಕನ್ನೇ ನುಂಗಿತ್ತು. ಜೀವನಕ್ಕೆ ಆಧಾರವಾಗಿದ್ದ ಕಾಫಿ ತೋಟ, ಭತ್ತದ ಗದ್ದೆ, ಆಶ್ರಯ ನೀಡಿದ್ದ ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದವು. ಗ್ರಾಮಸ್ಥರ ಭವಿಷ್ಯದ ದಾರಿಗಳೂ ಮುಚ್ಚಿದ್ದವು. ಅದೇ ಗ್ರಾಮದ ಮಹಿಳೆಯರು ಈಗ ಹಳೆಯ ನೆನಪು ಮರೆತು, ಹೊಸ ಬದುಕು ಕಟ್ಟಿಕೊಳ್ಳಲು ಹಲವು ಯೋಜನೆ ರೂಪಿಸಿ
ಕೊಂಡಿದ್ದಾರೆ. ಅದಕ್ಕೆ ಸಂಘ– ಸಂಸ್ಥೆಗಳೂ ನೆರವಾಗುತ್ತಿವೆ.

ಮಡಿಕೇರಿಯಿಂದ 10 ಕಿ.ಮೀ. ದೂರದ ಕಾಲೂರು ಬೆಟ್ಟ ಗುಡ್ಡಗಳಿಂದ ಕೂಡಿರುವ ಗ್ರಾಮ. ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾದ ಕೊಡಗಿನ 38 ಹಳ್ಳಿಗಳಲ್ಲಿ ಕಾಲೂರು ಒಂದು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೀಡಿದ್ದ ಅಲ್ಪ ಪರಿಹಾರವು ಬದುಕು ರೂಪಿಸಲಿಲ್ಲ. ಕೆಲಸಕ್ಕೆ ಜಮೀನೂ ಇರಲಿಲ್ಲ. ಗದ್ದೆಗಳಲ್ಲಿ ಮಣ್ಣು ತುಂಬಿದ್ದವು; ಕಾಫಿ ತೋಟಗಳು ಕುಸಿದಿದ್ದವು. ಆ ಗ್ರಾಮದ ಮಹಿಳೆಯರ ನೆರವಿಗೆ ‘ಪ್ರಾಜೆಕ್ಟ್‌ ಕೂರ್ಗ್‌’ ಸಂಸ್ಥೆ ಮುಂದಾಗಿರುವುದು ಹೊಸ ಆಶಾಕಿರಣ ಮೂಡಿಸಿದೆ. ನವ ಉದ್ಯೋಗವು 63 ಮಹಿಳೆಯರಿಗೆ ಆದಾಯ ತಂದುಕೊಟ್ಟಿದೆ. ಬದುಕುವ ಛಲದೊಂದಿಗೆ ನಿತ್ಯದ ಹೊಟ್ಟೆ ತುಂಬಿಸುತ್ತಿದೆ.

ADVERTISEMENT

ಸಂತ್ರಸ್ತ ಮಹಿಳೆಯರು ಹೊಲಿಗೆ ತರಬೇತಿ ಪಡೆದಿರುವ ಜತೆಗೆ ‘ಕೂರ್ಗ್‌ ಫ್ಲೇವರ್ಸ್‌’ ಹೆಸರಿನಲ್ಲಿ 11 ಬಗೆಯ ಮಸಾಲೆ ಪದಾರ್ಥ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ‘ಯಶಸ್ವಿ’ ಕೌಶಲ ತರಬೇತಿ ಕೇಂದ್ರವು ಸಹಕಾರ ನೀಡುತ್ತಿದ್ದು ದಾನಿಗಳು ಆರ್ಥಿಕ ನೆರವು ಒದಗಿಸುತ್ತಿದ್ದಾರೆ.

ಏನೇನು ತಯಾರಿಕೆ?: ರಸಂ ಪೌಡರ್‌, ಹಪ್ಪಳ, ಬಿರಿಯಾನಿ ಮಸಾಲೆ, ಚಿಕನ್‌ ಮಿಕ್ಸ್‌, ಪೋರ್ಕ್‌ ಮಸಾಲೆ, ಹರ್ಬಲ್‌ ಜ್ಯೂಸ್‌, ಚಟ್ನಿ ಪುಡಿ, ಸಿರಿಧಾನ್ಯದ ಪುಡಿಯನ್ನು ತಮ್ಮದೇ ಬ್ರ್ಯಾಂಡ್‌ ಅಡಿ ತಯಾರಿಸಿದ್ದಾರೆ. 21 ದಿನದಲ್ಲಿ ಮಸಾಲೆ ಪದಾರ್ಥಗಳು ಸಿದ್ಧಗೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಹೊಲಿಗೆ ತರಬೇತಿ ಪಡೆದಿದ್ದ ಮಹಿಳೆಯರು ಬ್ಯಾಗ್‌ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಹೈದರಾಬಾದ್‌ನ ಸಂಸ್ಥೆಯೊಂದು 500 ಬ್ಯಾಗ್‌ಗಳಿಗೆ ಬೇಡಿಕೆಯಿಟ್ಟಿದೆ. ಮಡಿಕೇರಿಯ ಓಂಕಾರೇಶ್ವರ ದೇಗುಲ ಸಮಿತಿಯಿಂದ 2 ಸಾವಿರ ಬ್ಯಾಗ್‌ ತಯಾರಿಸಿಕೊಡುವಂತೆ ಕೋರಿಕೆ ಬಂದಿದೆ. ಪ್ರತಿ ಬ್ಯಾಗ್‌ಗೆ ₹ 35 ನಿಗದಿ ಮಾಡಲಾಗಿದೆ. ಸಂತ್ರಸ್ತ ಮಹಿಳೆಯರು ನೋವು ಮರೆತು ಸ್ವಂತ ಉದ್ಯೋಗದಲ್ಲಿ ಹೊಸ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಸದ್ಯಕ್ಕೆ ಕಾಲೂರು ಸರ್ಕಾರಿ ಶಾಲಾ ಆವರಣವೇ ಮಸಾಲೆ ಪದಾರ್ಥ ಹಾಗೂ ಬ್ಯಾಗ್‌ ತಯಾರಿಕೆ ಕೇಂದ್ರ. ಕಾಕೇರಿ ಕುಟುಂಬಸ್ಥರು ತಯಾರಿಕಾ ಘಟಕ ಸ್ಥಾಪಿಸಲು ಜಾಗ ಕಲ್ಪಿಸುವ ಭರವಸೆ ನೀಡಿದ್ದು, ಸಂತ್ರಸ್ತ ಮಹಿಳೆಯರ ಉತ್ಸಾಹ ಇಮ್ಮಡಿಗೊಳಿಸಿದೆ.

‘ಮಡಿಕೇರಿಯ ಕೆಲವು ಮಳಿಗೆಗಳಲ್ಲಿ ಗ್ರಾಹಕರಿಗೆ ಈ ಪದಾರ್ಥಗಳು ಸಿಗಲಿವೆ. ವೆಬ್‌ಸೈಟ್‌: www.coorgflavours.comನಲ್ಲಿಯೂ ಖರೀದಿಸಬಹುದು.

ಮೊಬೈಲ್‌: 98458 31683 ಸಂದೇಶ ಕಳುಹಿಸಿದರೆ ಕೊಡಗಿನಾದ್ಯಂತ ಮನೆ ಬಾಗಿಲಿಗೆ ಮಸಾಲೆ ಪದಾರ್ಥ ತಲುಪಿಸುವ ವ್ಯವಸ್ಥೆಯಿದೆ. ಗುಣಮಟ್ಟದಲ್ಲಿ ರಾಜಿಯಿಲ್ಲ. ದಾನಿಗಳ ನೆರವಿನಿಂದ ಪ್ರತಿ ಸಂತ್ರಸ್ತ ಮಹಿಳೆಗೆ ₹ 3 ಸಾವಿರ ಭತ್ಯೆ ನೀಡಲಾಗುತ್ತಿದೆ. ಮಾರುಕಟ್ಟೆ ವಿಸ್ತರಣೆಯಾದಂತೆ ಬಂದ ಲಾಭವನ್ನು ಸಂತ್ರಸ್ತ ಮಹಿಳೆಯರ ಕುಟುಂಬಗಳ ಅಭಿವೃದ್ಧಿಗೇ ಬಳಸುತ್ತೇವೆ’ ಎಂದು ಪ್ರಾಜೆಕ್ಟ್‌ ಕೂರ್ಗ್‌ನ ಸಂಚಾಲಕ ಬಾಲಾಜಿ ಕಶ್ಯಪ್‌ ತಿಳಿಸಿದರು.

**
‘ಪ್ರಾಜೆಕ್ಟ್‌ ಕೂರ್ಗ್‌’ನವರು ದುಡಿಮೆಗೆ ದಾರಿ ತೋರಿಸಿದ್ದು, ಹಸಿವು ನೀಗುವಂತೆ ಮಾಡಿದೆ. ಹಣ ನೀಡಿದ್ದರೆ ಕೆಲವೇ ದಿನಗಳಲ್ಲಿ ಖಾಲಿ ಆಗುತ್ತಿತ್ತು’
ಕಾಲೂರು
**
ಪರಿಸ್ಥಿತಿ ಕಂಡು ಬದುಕೇ ಭಾರವಾಗಿತ್ತು. ಹೊಸ ಉದ್ಯೋಗದಿಂದ ಪ್ರಕೃತಿ ವಿಕೋಪದ ಕಹಿ ಘಟನೆ ಮರೆಯಾಗಿದೆ
ಕವಿತಾ, ಸಂತ್ರಸ್ತ ಮಹಿಳೆ

**

ನವ ಉದ್ಯೋಗದಿಂದ 63 ಮಹಿಳೆಯರಿಗೆ ಅನುಕೂಲ
ದಾನಿಗಳಿಂದ ಆರ್ಥಿಕ ನೆರವು
ಸಂತ್ರಸ್ತರ ಅಭಿವೃದ್ಧಿಗೆ ಲಾಭ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.