ADVERTISEMENT

ಬೆಟ್ಟಿಂಗ್‌ ಆರೋಪದ ಪ್ರಕರಣ | ಅನಿಲ್‌ ಗೌಡ ವಿಚಾರಣೆ ಜರೂರಿದೆ: ಇ.ಡಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 16:19 IST
Last Updated 29 ಆಗಸ್ಟ್ 2025, 16:19 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ವಿರುದ್ಧದ ಅಕ್ರಮ ಆನ್‌ ಲೈನ್‌ ಮತ್ತು ಆಫ್‌ ಲೈನ್‌ ಬೆಟ್ಟಿಂಗ್‌ ಆರೋಪದ ಪ್ರಕರಣ ಸಾಮಾನ್ಯವಾದುದಲ್ಲ.  ಹಾಗಾಗಿ, ಅವರ ಆರ್ಥಿಕ ವ್ಯವಹಾರಗಳ ಪ್ರಮುಖ ಪಾಲುದಾರ ಎಚ್‌.ಅನಿಲ್‌ ಗೌಡ ವಿಚಾರಣೆ ಅತ್ಯಂತ ಜರೂರಾಗಿದೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ಗೆ ಅರುಹಿದೆ.

‘ಇ.ಡಿ ಅಧಿಕಾರಿಗಳು ನನಗೆ ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸಬೇಕು’ ಎಂದು ಕೋರಿ ವಕೀಲರೂ ಆದ ರಾಜರಾಜೇಶ್ವರಿ ನಗರದ ನಿವಾಸಿ, ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಅವರ ಪುತ್ರ ಎಚ್‌.ಅನಿಲ್‌ ಗೌಡ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಅನಿಲ್‌ ಗೌಡ ಪರ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ವಿಕಾಸ್ ಪಹ್ವಾ, ‘ಅರ್ಜಿದಾರರು ವೃತ್ತಿನಿರತ ವಕೀಲರಿದ್ದು ಅವರಿಗೆ ಸಮನ್ಸ್‌ ಜಾರಿಗೊಳಿಸಿ ತನಿಖೆಗೆ ಬರಮಾಡಿಕೊಳ್ಳುವ ಇ.ಡಿ ಇರಾದೆಯು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ, ಅವರಿಗೆ ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವತನಕ ಸಮನ್ಸ್‌ಗೆ ತಡೆ ನೀಡಬೇಕು ಹಾಗೂ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಇ.ಡಿಗೆ ನಿರ್ದೇಶಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ADVERTISEMENT

‘ಅನಿಲ್‌ ಗೌಡ ಶಾಸಕ ವೀರೇಂದ್ರ ಅವರಿಗೆ ಕಾನೂನು ಸಲಹೆಗಾರ. ವೀರೇಂದ್ರ ಅವರ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆಯೇ ಹೊರತು ಕಂಪನಿಯ ದೈನಂದಿನ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ. ಇ.ಡಿ ತನ್ನ ಅಧಿಕಾರ ವ್ಯಾಪ್ತಿ ಮೀರಿ, ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಸಮನ್ಸ್‌ ಜಾರಿ ಮಾಡಿ ಅವರಿಂದ ದಾಖಲೆಗಳನ್ನು ಕೇಳಿದೆ. ಹಾಗಾಗಿ, ಅವರನ್ನು ವಿಚಾರಣೆಗೆ ಒಳಪಡಿಸದಂತೆ ಇ.ಡಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ಇ.ಡಿ ಪರ ವಕೀಲ ಮಧುಕರ ಎಂ.ದೇಶಪಾಂಡೆ, ‘ವಕೀಲಿಕೆಯ ಹೆಸರಿನಲ್ಲಿ ಅಪರಾಧ ಪ್ರಕರಣಗಳನ್ನು ಎಸಗಿ ಅದರಿಂದ ರಕ್ಷಣೆ ಪಡೆಯಲಾಗದು. ಅನಿಲ್ ಗೌಡ ಅವರು ಕೆ.ಸಿ.ವೀರೇಂದ್ರ ಅವರ ಕಂಪನಿಗಳಲ್ಲಿ ಸಕ್ರಿಯ ಪಾಲುದಾರರಾಗಿದ್ದಾರೆ. ಈ ಕಂಪನಿಗಳಲ್ಲಿ ಅಕ್ರಮ ಹಣ ಹೂಡಿಕೆಯ ಬಗ್ಗೆ ಗಂಭೀರ ಆರೋಪಗಳಿವೆ. ಹಾಗಾಗಿ, ಅನಿಲ್‌ ಗೌಡ ಅವರ ಹಣ ಹೂಡಿಕೆಯ ಬಗ್ಗೆ ಪರಿಶೀಲನೆ ನಡೆಸುವ ಜರೂರಿದೆ’ ಎಂದರು.

ವೀರೇಂದ್ರ ಅವರ ಕಂಪನಿಗಳಿಗೆ ಸಂಬಂಧಿಸಿದ ಆ್ಯಪ್‌ಗಳ ಮುಖಾಂತರ ಲಕ್ಷಾಂತರ ಜನರು ಹಣ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ವಕೀಲನಾಗಿ ವಾಣಿಜ್ಯ ಕಂಪನಿಗಳ ಪಾಲುದಾರರಾಗುವಂತಿಲ್ಲ. ನಾವು ಅವರಿಂದ ಅವರ ಲ್ಯಾಪ್ ಟಾಪ್, ಮೊಬೈಲ್ ವಿವರ ಮತ್ತಿತರೆ ಸಂಬಂಧಿತ ದಾಖಲೆಗಳನ್ನು ಕೇಳಿದ್ದೇವೆಯೇ ಹೊರತು ಅವರ ವಕೀಲ ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಇಚ್ಛೆ ಹೊಂದಿಲ್ಲ’ ಎಂದು ಪ್ರತಿಪಾದಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು. ಅನಿಲ್‌ ಗೌಡ ಪರ ಹೈಕೋರ್ಟ್‌ ವಕೀಲ ರಜತ್‌ ವಕಾಲತ್ತು ವಹಿಸಿದ್ದಾರೆ.

ಅರ್ಜಿಯಲ್ಲಿ ಏನಿದೆ?:

ಇ.ಡಿ ಅಧಿಕಾರಿಗಳು ಇದೇ 22 ಮತ್ತು 23ರಂದು ಎಚ್.ಅನಿಲ್‌ ಗೌಡ ಅವರ ಮನೆಯ ಶೋಧ ನಡೆಸಿದ್ದರು. 24ರಂದು ಸಮನ್ಸ್‌ ಜಾರಿ ಮಾಡಿ, ‘ಎರಡು ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಹಾಜರುಪಡಿಸಬೇಕು’ ಎಂದು ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.