ADVERTISEMENT

ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದೇನೆ– ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:07 IST
Last Updated 13 ಮಾರ್ಚ್ 2024, 15:07 IST
ಎಚ್‌.ಸಿ. ಮಹದೇವಪ್ಪ
ಎಚ್‌.ಸಿ. ಮಹದೇವಪ್ಪ   

ಬೆಂಗಳೂರು: ‘ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಕುರಿತಂತೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಸಚಿವರು, ಶಾಸಕರ ಅಭಿಪ್ರಾಯವನ್ನು ವರಿಷ್ಠರು ಕೇಳಿದ್ದಾರೆ. ಸ್ಪರ್ಧಿಸುವಂತೆ ನನ್ನ ಮೇಲೆ ಪ್ರೀತಿಯಿಂದ ಹೇಳಿದ್ದಾರೆ. ಆದರೆ, ನಾನು ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದೇನೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಚಾಮರಾಜನಗರ ಕ್ಷೇತ್ರಕ್ಕೆ ಸ್ಕ್ರೀನಿಂಗ್‌ ಸಮಿತಿ ಈಗಾಗಲೇ ಹೆಸರುಗಳನ್ನು ಶಿಫಾರಸು ಮಾಡಿದೆ. ಆದರೆ, ಯಾರನ್ನು ಮಾಡಿದೆ ಎನ್ನುವುದು ಗೊತ್ತಿಲ್ಲ. ಅಂತಿಮವಾಗಿ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸುತ್ತದೆ’ ಎಂದರು.  

‘ಮಗ ಸುನಿಲ್ ಬೋಸ್‌ ಕಾಂಗ್ರೆಸ್‌ನಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದಾನೆ. ಕಳೆದ ಮೂರು ಬಾರಿ ಟಿಕೆಟ್ ಸಿಗದೆ ವಂಚಿತನಾಗಿದ್ದಾನೆ. ಇದು ಮುಖ್ಯಮಂತ್ರಿಗೂ ಗೊತ್ತಿದೆ’ ಎಂದರು.

ADVERTISEMENT

ಮುಖ್ಯಮಂತ್ರಿ ಜೊತೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ‘40 ವರ್ಷಗಳಿಂದ ನಾವು ಜೊತೆಯಾಗಿಯೇ ಇದ್ದೇವೆ. ಒಟ್ಟಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಈಗ ಯಾಕೆ ದೂರ ಆಗೋಣ? ಅಷ್ಟಕ್ಕೂ ದೂರವಾಗುವಂತಹ ಕಾರಣವಾದರೂ ಏನಿದೆ? ಕೆಲವರು ನಮ್ಮಿಬ್ಬರ ನಡುವೆ ಗೊಂದಲ ಸೃಷ್ಟಿಸಬಹುದು. ಅದು ಸೃಷ್ಟಿ ಅಷ್ಟೆ’ ಎಂದರು.

‘ದಲಿತ ಮುಖ್ಯಮಂತ್ರಿ’ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ‘ದುಡಿಯುವ ವರ್ಗ ಆಳುವ ವರ್ಗ ಆಗಬೇಕು ಎಂದು ಹೇಳಿದ್ದೇನೆ. ಅಂಬೇಡ್ಕರ್ ಸಿದ್ಧಾಂತ ಗೊತ್ತಿರುವವರಿಗೆ ಈ ಮಾತು ಅರ್ಥವಾಗುತ್ತದೆ. ಆದರೆ, ಅಧಿಕಾರದ ಪಿತ್ತ ನೆತ್ತಿಗೆ ಏರಿರುವವರು ತಮಗೆ ಬೇಕಾದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಹಲವು ರಾಜ್ಯಗಳಲ್ಲಿ ಈಗಾಗಲೇ ದಲಿತ ಮುಖ್ಯಮಂತ್ರಿ ಆಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.