ADVERTISEMENT

ಗಡಿ ವಿವಾದ ಕೆಣಕಿದ ಮಹಾರಾಷ್ಟ್ರ ಶಾಸಕ; ಕನ್ನಡ ಪರ ಸಂಘಟನೆಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 15:48 IST
Last Updated 27 ನವೆಂಬರ್ 2019, 15:48 IST
   

ಬೆಳಗಾವಿ: ಮುಂಬೈನಲ್ಲಿ ಬುಧವಾರ ನಡೆದ ನೂತನ ಶಾಸಕರ ಪ್ರಮಾಣ ವಚನ ಸಂದರ್ಭದಲ್ಲಿ ಚಂದಗಡ ಶಾಸಕ, ಎನ್‌ಸಿಪಿಯ ರಾಜೇಶ ಪಾಟೀಲ ಅವರು ಬೆಳಗಾವಿ ಸೇರಿದಂತೆ ಗಡಿಭಾಗದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಘೋಷಣೆ ಕೂಗಿದ್ದಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ರಾಜೇಶ ಪಾಟೀಲ ಅವರು, ‘ದೇವರು ಹಾಗೂ ಗಡಿಭಾಗದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಬೆಳಗಾವಿ, ನಿಪ್ಪಾಣಿ, ಬೀದರ್‌, ಬಾಲ್ಕಿ, ಕಾರವಾರ ಸೇರಿದಂತೆ ಸಂಯುಕ್ತ ಮಹಾರಾಷ್ಟ್ರ ನಿರ್ಮಾಣವಾಗಲೇಬೇಕು’ ಎಂದು ಪ್ರಮಾಣ ವಚನ ಸ್ವೀಕರಿಸುವ ವೇಳೆ ಘೋಷಿಸಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

ಎಚ್ಚರಿಕೆ ವಹಿಸಲಿ:

ADVERTISEMENT

‘ಗಡಿ ಕುರಿತು ಆಗಾಗ ತಗಾದೆ ತೆಗೆಯುತ್ತಿದ್ದ ಶಿವಸೇನಾ ನೇತೃತ್ವದ ಮೈತ್ರಿಕೂಟವು ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ. ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಈ ಕುರಿತು ಹೇಳಿಕೆಗಳು, ಘೋಷಣೆಗಳು ಬರುವ ಅಪಾಯವಿದೆ. ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು’ ಎಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಗಡಿ ವ್ಯಾಜ್ಯವು ಸುಪ್ರೀಂ ಕೋರ್ಟ್‌ನಲ್ಲಿದೆ. ಇಂತಹ ಸಮಯದಲ್ಲಿ ಈ ವಿಷಯವನ್ನು ಮಹಾರಾಷ್ಟ್ರದ ಶಾಸಕರು ಎತ್ತಿರುವುದು ಸಮಂಜಸವಲ್ಲ’ ಎಂದರು.

‘ನ್ಯಾಯಾಲಯದಲ್ಲಿ ರಾಜ್ಯದ ಪರ ವಾದ ಮಂಡಿಸಲು, ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಲು ಗಡಿ ಉಸ್ತುವಾರಿ ಸಚಿವರ ಅಗತ್ಯತೆ ಬಹಳ ಇದೆ. ಆದರೆ, ಒಂದೂವರೆ ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಸಚಿವರಾರೂ ನೇಮಕವಾಗಿಲ್ಲ. ಇದಲ್ಲದೇ, ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗಡಿ ಭಾಗದ ಸಂರಕ್ಷಣಾ ಆಯೋಗಕ್ಕೂ ಸೂಕ್ತ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.