ADVERTISEMENT

Maharashtra civic polls | ಮತ ಕಳುವಿನ ಮತ್ತೊಂದು ಅಧ್ಯಾಯ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:23 IST
Last Updated 16 ಜನವರಿ 2026, 16:23 IST
   

ಬೆಂಗಳೂರು: ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯು ಆಯೋಗದ ವಿಶ್ವಾಸಾರ್ಹತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟಿಸಿದೆ. ಇಂತಹ ಆತಂಕಗಳು ಮಹಾರಾಷ್ಟ್ರದಲ್ಲಷ್ಟೇ ಅಲ್ಲ, ದೇಶದ ಇತರೆ ಭಾಗಗಳಲ್ಲಿಯೂ ಪ್ರತಿಧ್ವನಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ, ‘ಪ್ರಜಾಸತ್ತಾತ್ಮಕ ವ್ಯವಸ್ಥೆ ಜೀವಂತವಾಗಿರಲು ಪ್ರತಿಯೊಂದು ಮತವೂ ಪವಿತ್ರವಾಗಿರಬೇಕು. ಅದರ ರಕ್ಷಣಾ ಕ್ರಮಗಳು ನಿಜವಾಗಿಯೂ ಪರಿಣಾಮಕಾರಿಯಾಗಿರಬೇಕು. ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರಿಗೆ ಹಾಕಿದ ಶಾಯಿಯನ್ನು ಸುಲಭವಾಗಿ ಅಳಿಸಬಹುದು ಎನ್ನುವುದನ್ನು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳು ತೋರಿಸುತ್ತಿವೆ. ಇದು ತಾಂತ್ರಿಕ ದೋಷವಲ್ಲ, ಇದು ಮತಕಳವು ಕಥನದ ಮತ್ತೊಂದು ಕಳವಳಕಾರಿ ಅಧ್ಯಾಯ’ ಎಂದು ಟೀಕಿಸಿದ್ದಾರೆ.

‘ನೈಜ ಮತ್ತು ಸೂಕ್ತ ಪ್ರಶ್ನೆಗಳನ್ನು ಎತ್ತಿದಾಗ ಅವುಗಳಿಗೆ ನಿರಾಕರಣೆ, ದಾರಿ ತಪ್ಪಿಸುವ ಉತ್ತರಗಳು ಅಥವಾ ಮೌನವೇ ಎದುರಾಗುತ್ತಿದೆ. ಇದರ ಪರಿಣಾಮವಾಗಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆ ಕ್ಷೀಣಿಸುತ್ತಿದೆ. ಮೂಲಭೂತ ರಕ್ಷಣಾ ಕ್ರಮಗಳನ್ನು ದುರ್ಬಲಗೊಳಿಸುವುದು, ನಾಗರಿಕರ ಆತಂಕಗಳನ್ನು ತಿರಸ್ಕರಿಸುವುದು ಪ್ರಜಾಪ್ರಭುತ್ವವನ್ನು ಹಾನಿಗೊಳಿಸುತ್ತದೆ. ಚುನಾವಣಾ ಆಯೋಗವು ತಕ್ಷಣವೇ ಪಾರದರ್ಶಕ ಕ್ರಮ ತೆಗೆದುಕೊಳ್ಳಬೇಕು. ಹೊಣೆಗಾರಿಕೆ ತೋರಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.