ADVERTISEMENT

ಗಡಿಯಲ್ಲಿ ಸಮೀಕ್ಷೆ: ಮಹಾರಾಷ್ಟ್ರ ನಡೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 21:58 IST
Last Updated 19 ಫೆಬ್ರುವರಿ 2021, 21:58 IST

ಬೆಂಗಳೂರು: ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರವು ನಡೆಸುತ್ತಿರುವ ಅನ್ಯ ಭಾಷಿಗರ ಸಮೀಕ್ಷೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಗೆಳೆಯರ ಬಳಗ ಖಂಡಿಸಿವೆ.

‘ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆ ಹಾಗೂ ದಕ್ಷಿಣ ಸೊಲ್ಲಾಪುರದ ಗಡಿ ಭಾಗದಲ್ಲಿ ಅನ್ಯ ಭಾಷಿಕರ ಸಮೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರವು ಅಲ್ಲಿನ ಕೆಲ ಗ್ರಾಮ ಪಂಚಾಯಿತಿಗಳಿಗೆ ಆದೇಶ ನೀಡಿರುವ ಕ್ರಮ ಖಂಡನೀಯ. ಅಲ್ಲಿನ ಸರ್ಕಾರದ ಇಂತಹ ಪ್ರಯತ್ನವು ಅಸಂಗತ ಮತ್ತು ಅಪ್ರಸ್ತುತ. ಸೌಹಾರ್ದ, ಸೌಜನ್ಯ ಮತ್ತು ಸಾಮರಸ್ಯ ಭಾವದಿಂದ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಅಲ್ಲಿನ ಸ್ವಾಭಿಮಾನಿ ಕನ್ನಡಿಗರಿಗೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬದ್ಧತೆಯನ್ನು ನೀಡಬೇಕಾದದ್ದು ಆ ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಡಾ.ಸಿ. ಸೋಮಶೇಖರ್ ತಿಳಿಸಿದ್ದಾರೆ.

‘ಅನಗತ್ಯವಾಗಿ ಆಗಾಗ ಗಡಿ ಭಾಗದಲ್ಲಿನ ಕನ್ನಡಿಗರ ಸ್ವಾಭಿಮಾನ ಕೆಣಕುವ ಇಂತಹ ಕಾರ್ಯಗಳಿಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಬಾರದು. ಭಾಷಾ ಸಾಮರಸ್ಯ ಮತ್ತು ಸಹಬಾಳ್ವೆಯೇ ಗಡಿ ಭಾಗದ ಜನರ ಸಾಮಾಜಿಕ ಭದ್ರತೆಗೆ ಪ್ರಮುಖ ಸಾಧನ ಎಂಬುದನ್ನು ಮಹಾರಾಷ್ಟ್ರ ಸರ್ಕಾರ ಅರಿತುಕೊಳ್ಳಬೇಕು. ಮಹಾರಾಷ್ಟ್ರ ಗಡಿ ಭಾಗದಲ್ಲಿನ ನಮ್ಮ ಕನ್ನಡಿಗರ ಭಾವನೆಗಳಿಗೆ ಮತ್ತು ಅವರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ಮಹಾರಾಷ್ಟ್ರ ಸರ್ಕಾರದ ನಡೆ ಹಲವು ಗುಮಾನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಸಂವಿಧಾನವು ದೇಶದ ಪ್ರಜೆಗಳಿಗೆ ನೀಡಿದ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ. ಕೇಂದ್ರ ಗೃಹ ಸಚಿವಾಲಯವು ತಕ್ಷಣ ಮಧ್ಯ ಪ್ರವೇಶಿಸಿ, ಈ ಸಂವಿಧಾನ ವಿರೋಧಿ ಆದೇಶವನ್ನು ರದ್ದುಪಡಿಸಬೇಕು. ಕನ್ನಡಿಗರ ಸಹನೆಯನ್ನು ನಿರಂತರವಾಗಿ ಕೆಣಕುತ್ತಿರುವ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಇಲ್ಲಿನ ರಾಜ್ಯ ಸರ್ಕಾರವು ಅಧಿಕೃತವಾಗಿ ಪ್ರತಿಭಟನೆ ಸಲ್ಲಿಸಬೇಕು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಸಮಾಜದ ಸ್ವಾಸ್ತ್ಯ ಕದಡುತ್ತಿರುವ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಎಚ್ಚರಿಸುವಂತೆ ಮನವಿ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.