ADVERTISEMENT

ನಮ್ಮದು‌ ಸನ್ಯಾಸಿಗಳ ಪಕ್ಷ ಅಲ್ಲ: ಸಚಿವ ಮುರುಗೇಶ್ ನಿರಾಣಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:20 IST
Last Updated 25 ಜೂನ್ 2022, 6:20 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ    

ಕಲಬುರಗಿ: 'ಶಿವಸೇನಾ ಬಂಡಾಯ ಶಾಸಕರು ನಮ್ಮ ‌ಕಡೆ ಬಂದರೆ ಸರ್ಕಾರ ರಚಿಸಲಿದ್ದೇವೆ. ಸುಮ್ಮನೆ ಕೂರಲು ಬಿಜೆಪಿ ಸನ್ಯಾಸಿಗಳ ಪಕ್ಷ ಅಲ್ಲ' ಎಂದು ಬೃಹತ್ ‌ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಎನ್.ಸಿ.ಪಿ, ಶಿವಸೇನೆ ಮೂರು ಸೇರಿ ಸರ್ಕಾರ ಮಾಡಿರುವುದೇ ಒಂದು ಅನೈತಿಕ. ಶಿವಸೇನೆಯೊಂದಿಗೆ 25 ವರ್ಷಗಳಿಂದ ನಾವು ಮೈತ್ರಿಯಲ್ಲಿದ್ದೆವು ಎಂದರು.

ಶಿವಸೇನೆ, ಎನ್ ಸಿಪಿ, ಕಾಂಗ್ರೆಸ್ ಮೂವರೂ ಸೇರಿ ಒಬ್ಬರ ಕಡೆ ಬ್ರೇಕ್, ಒಬ್ಬರ ಕಡೆ ಸ್ಟೇರಿಂಗ್ , ಒಬ್ಬರ ಕಡೆ ಎಕ್ಸಲೇಟರ್ ಆಗಿ ಗಾಡಿ ಸುಸೂತ್ರವಾಗಿ ನಡೆಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ADVERTISEMENT

ಈಗಾಗಲೇ ಶಿವಸೇನೆಯ ಅತಿ ಹೆಚ್ಚು ಶಾಸಕರು ಸರ್ಕಾರದಿಂದ ಹೊರಗಡೆ ಬಂದಿದ್ದಾರೆ. ಇವರೆಲ್ಲ ಬಿಜೆಪಿ ಕಡೆ ಬರುತ್ತಾರೆ ಎನ್ನುವ ವಿಶ್ವಾಸ ಇದೆ. ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಿರುವ ಸರ್ಕಾರ ಬಂದ ನಂತರ ಮಹಾರಾಷ್ಟ್ರದಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಎಲ್ಲರೂ ಬೇಸತ್ತು ಬಿಜೆಪಿ ನೇತೃತ್ವದಲ್ಲಿ ಸರ್ಕಾರ ಇರುವುದೇ ಮುಖ್ಯ ಎನ್ನುತ್ತಿದ್ದಾರೆ. ಆದರೆ ಈ ಬಿಕ್ಕಟ್ಟಿನಲ್ಲಿ ಯಾವುದೇ ರೀತಿಯಲ್ಲಿ ಬಿಜೆಪಿ ಮಧ್ಯಪ್ರದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಅವರವರ ಕಚ್ಚಾಟದಲ್ಲಿ ಅಲ್ಲಿರುವ ಶಾಸಕರು ನಮ್ಮ ಕಡೆ ಬರುತ್ತಿದ್ದಾರೆ. ಅವರಾಗಿಯೇ ನಮ್ಮ ಕಡೆ ಬಂದಾಗ ಸರ್ಕಾರ ರಚನೆ ಮಾಡಿ ಒಳ್ಳೆ ಆಡಳಿತ ಕೊಡಲು ಬಿಜೆಪಿ ಚಿಂತನೆ ಮಾಡುತ್ತದೆ. ಅವರಾಗೇ ನಮ್ಮ ಹತ್ತಿರ ಬಂದು ಸರ್ಕಾರ ಮಾಡಿ ಎಂದಾಗ ನಾವು ಸುಮ್ಮನೆ ಕೂಡಲು ಆಗಲ್ಲ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿ ಕೂಡ ಒಳ್ಳೆಯ ಆಡಳಿತ ನೀಡುವ ಬಿಜೆಪಿ ಸರ್ಕಾರ ತರುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.