ADVERTISEMENT

ಮಹಿಳಾ ದಿನಾಚರಣೆ: ಸೇವೆಗೆ ಬದುಕು ಮುಡಿಪಿಟ್ಟವರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 19:33 IST
Last Updated 8 ಮಾರ್ಚ್ 2019, 19:33 IST
ವಿವಿಧ ಕ್ಷೇತ್ರದಲ್ಲಿ ಸಾಧಕ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ಶಾಸಕಿ ಸೌಮ್ಯಾ ರೆಡ್ಡಿ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮೀ ಬಸವಲಿಂಗರಾಜು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಇದ್ದಾರೆ    –ಪ್ರಜಾವಾಣಿ ಚಿತ್ರ
ವಿವಿಧ ಕ್ಷೇತ್ರದಲ್ಲಿ ಸಾಧಕ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ಶಾಸಕಿ ಸೌಮ್ಯಾ ರೆಡ್ಡಿ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮೀ ಬಸವಲಿಂಗರಾಜು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಇದ್ದಾರೆ    –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಶೇಷ ಮಕ್ಕಳ ಕಾಳಜಿವಹಿಸಿದವರು, ದೇವದಾಸಿ, ಬಾಲ್ಯವಿವಾಹದಂಥ ಶೋಷಣೆಗಳ ವಿರುದ್ಧ ತಿರುಗಿ ಬಿದ್ದವರು, ಮಹಿಳೆಯರ ಸಬಲೀಕರಣಕ್ಕಾಗಿ ಬದುಕು ಮುಡಿಪಾಗಿಟ್ಟವರು...

–ಹೀಗೆ ಹಲವು ಕ್ಷೇತ್ರಗಳಲ್ಲಿ ಸದ್ದಿಲ್ಲದೇ ಕೆಲಸ ಮಾಡಿಕೊಂಡಿದ್ದ 26 ಮಂದಿಗೆ ನಗರದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಪ್ರಶಸ್ತಿ ನೀಡಲು ಅರ್ಹ ವ್ಯಕ್ತಿಗಳಿಗಾಗಿ ಸಾಕಷ್ಟು ಹುಡುಕಾಡಿದ್ದೇವೆ. ಈ ಬಾರಿ ನಮಗೆ ಸಮಾಜದಲ್ಲಿರುವ ಮುತ್ತು ರತ್ನಗಳೇ ಸಿಕ್ಕಿವೆ’ ಎಂದು ಇಲಾಖೆ ಸಚಿವೆ ಜಯಮಾಲಾ ಬಣ್ಣಿಸಿದಾಗ ಪ್ರಶಸ್ತಿ ಪುರಸ್ಕೃತರ ಮುಖದಲ್ಲಿ ಹೊಸ ಕಳೆ ಮಿಂಚಿತು.

ADVERTISEMENT

ವೇದಿಕೆ ಗಣ್ಯರ ಅಭಿನಂದನೆಯ ಜತೆಗೆ ವಿಶೇಷ ಮಕ್ಕಳು, ಆಯಾ ಸಾಧಕಿಯರ ನೆರವು ಪಡೆದವರು ಹಾಗೂ ಅಭಿಮಾನಿಗಳ ಚಪ್ಪಾಳೆ ಹಲವರ ಕಣ್ಣಂಚಿನಲ್ಲಿ ನೀರು ತರಿಸಿತು. ಲಿಂಗ ಪರಿವರ್ತಿತ, ಜೋಗತಿ ನೃತ್ಯ ಕಲಾವಿದರಾದ ಮಂಜಮ್ಮ ಜೋಗತಿ ಅವರಂತೂ ಭಾವುಕರಾದರು. ಅವರ ಬದುಕಿನ ಪುಟಗಳನ್ನು ಸಚಿವೆ ಜಯಮಾಲಾ ತೆರೆದಿಟ್ಟರು.

ಸ್ಮಶಾನ ಕಾಯುವ ಉಡುಪಿಯ ವನಜಾ ಅವರನ್ನು ಉಲ್ಲೇಖಿಸಿದ ಜಯಮಾಲಾ ‘ಎಲ್ಲರೂ ಭಯಪಡುವ ಜಾಗದಲ್ಲಿ ಪುಟ್ಟಮಕ್ಕಳನ್ನು ಸಾಕಿದ ಇವರು ವೀರಮಹಿಳೆ ಅಲ್ಲವೇ’ ಎಂದು ಪ್ರಶ್ನಿಸಿದಾಗ ಸಭಾಂಗಣದಲ್ಲಿ ಜೋರಾದ ಚಪ್ಪಾಳೆ ಕೇಳಿಬಂದಿತು.

ಕಪ್ಪ ಬೇಕೇ ಕಪ್ಪ?

‘ಕಪ್ಪ ಬೇಕೇ ಕಪ್ಪ? ನಿಮಗೇಕೆ ಕೊಡಬೇಕು ಕಪ್ಪ...’ ಎಂದು ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಸಂಭಾಷಣೆ ಹೇಳಿ ತಮ್ಮ ಸಿನಿಮಾ ಜೀವನದ ಬದುಕನ್ನು ಮೆಲುಕು ಹಾಕಿದರು ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾದ ಬಿ. ಸರೋಜಾದೇವಿ. ತಮಗೆ ಹೊದಿಸಿದ್ದ ಶಾಲನ್ನು ಜಯಮಾಲಾ ಅವರಿಗೆ ಹೊದಿಸಿ ಕೆನ್ನೆಗಳಿಗೆ ಮುತ್ತಿಟ್ಟರು.

ಸ್ತ್ರೀಶಕ್ತಿ ಗುಂಪಿನ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳ ವಿವರವಿರುವ ‘ಅಂತರಾಳ’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ವಿಶೇಷ ಅಂಚೆ ಲಕೋಟೆಯನ್ನೂ ಬಿಡುಗಡೆ ಮಾಡಲಾಯಿತು.

ಬಣ್ಣದ ಸೀರೆ, ಮಲ್ಲಿಗೆ ತೋಟ...

ಸಮಾರಂಭದಲ್ಲಿ ಬಣ್ಣ ಬಣ್ಣದ ಸೀರೆಯುಟ್ಟ ನಾರಿಯರು ಗಣ್ಯರ, ಕ್ಯಾಮೆರಾ ಕಣ್ಣುಗಳ ಕೇಂದ್ರಬಿಂದುವಾದರು. ‘ಈ ಹೆಣ್ಣುಮಕ್ಕಳನ್ನು ನೋಡುವುದೆಂದರೆ ಮಲ್ಲಿಗೆ ತೋಟದಲ್ಲಿ ಓಡಾಡಿದಂತೆ’ ಎಂದು ಜಯಮಾಲಾ ಹೇಳಿದಾಗ ನೀರೆಯರ ಮೊಗದಲ್ಲಿ ಮಂದಹಾಸ ಮೂಡಿತು.

‘ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಹೆಣ್ಣುಮಕ್ಕಳು ಇಡೀ ವ್ಯವಸ್ಥೆಯ ಆಧಾರ ಸ್ತಂಭಗಳು. ಇವರನ್ನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ’ ಎಂದು ಜಯಮಾಲಾ ಹೇಳಿದಾಗ ಮಹಿಳೆಯರು ‘ಹೋ...’ ಎಂದು ಕೂಗಿ ಹರ್ಷ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳು

* ಮಹಿಳಾ ದಕ್ಷತಾ ಸಮಿತಿ, ಬೆಂಗಳೂರು

* ಸ್ವಾತಿ ಮಹಿಳಾ ಸಂಘ, ಬೆಂಗಳೂರು

* ಶಕ್ತಿಧಾಮ ಸಂಸ್ಥೆ, ಮೈಸೂರು

* ಸಖಿ ಸಂಸ್ಥೆ, ಹೊಸಪೇಟೆ, ಬಳ್ಳಾರಿ

* ಮಹಾಲಕ್ಷ್ಮೀ ಮಹಿಳಾ ವಿವಿಧೋದ್ದೇಶ ತರಬೇತಿ ಕಲಾ ಕೇಂದ್ರ, ಗದಗ

* ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಧಾರವಾಡ

ವ್ಯಕ್ತಿ ಪ್ರಶಸ್ತಿಗಳು

* ದು. ಸರಸ್ವತಿ, ಬೆಂಗಳೂರು

* ಮಾಯಾ ಶರ್ಮಾ, ಬೆಂಗಳೂರು

* ಸೌಮ್ಯಾ, ಮೈಸೂರು

* ಜಾನಕಮ್ಮ, ಅಬಲಟ್ಟಿ, ಮೈಸೂರು

* ಕೆ. ನೀಲಾ, ಕಲಬುರ್ಗಿ

* ಮೀನಾಕ್ಷಿ, ಬೆಳಗಾವಿ

* ಡಾ.ಎಚ್‌.ಎಸ್‌. ಅನುಪಮಾ, ಹೊನ್ನಾವರ(ಅವರ ಪರವಾಗಿ ತಾಯಿ ಗಿರಿಜಮ್ಮ ಪ್ರಶಸ್ತಿ ಸ್ವೀಕರಿಸಿದರು)

ಕಲಾ ಕ್ಷೇತ್ರ

* ಬಿ. ಸರೋಜಾದೇವಿ, ನಟಿ, ಬೆಂಗಳೂರು

* ಕೃಪಾ ಪಡ್ಕೆ, ನೃತ್ಯ ಕಲಾವಿದೆ, ಮೈಸೂರು

* ಸುಭದ್ರಮ್ಮ ಮನ್ಸೂರ್‌, ಗಾಯಕಿ

* ಮಂಜಮ್ಮ ಜೋಗತಿ, ಬಳ್ಳಾರಿ

* ಸಂಗಮ್ಮ ಕಡಕೋಳ, ಬೆಳಗಾವಿ

ಸಾಹಿತ್ಯ ಕ್ಷೇತ್ರ

* ಕಮಲಾ ಹಂಪನಾ, ಬೆಂಗಳೂರು

* ಗಾಯತ್ರಿ ನಾವಡ, ಮಂಗಳೂರು

* ವಿನಯಾ ಒಕ್ಕುಂದ, ಧಾರವಾಡ (ಪರವಾಗಿ ನೀಲಾ ಅವರು ಪ್ರಶಸ್ತಿ ಸ್ವೀಕರಿಸಿದರು)

ಕ್ರೀಡೆ

* ಸಬಿಯಾ, ಬೆಂಗಳೂರು

* ಮಮತಾ ಪೂಜಾರಿ, ಬೆಂಗಳೂರು

ಶಿಕ್ಷಣ

* ಶಶಿಕಲಾ ಗುರುಪುರ, ದಕ್ಷಿಣ ಕನ್ನಡ

ವೀರಮಹಿಳೆ

* ವನಜಾ ಪೂಜಾರಿ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.