ADVERTISEMENT

ಅವಮಾನಿಸಿದ್ದಕ್ಕೆ ವಿಷಾದ: ತುಮಕೂರಿನ ರೈತನಿಗೆ ವಾಹನ ನೀಡಿದ ಮಹೀಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2022, 3:23 IST
Last Updated 30 ಜನವರಿ 2022, 3:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಾಹನ ಖರೀದಿಸಲು ಬಂದಿದ್ದ ಯುವ ರೈತನನ್ನು ತುಮಕೂರಿನ ಷೋ ರೂಂ ಸಿಬ್ಬಂದಿ ಅವಮಾನಿಸಿದ ವಿಚಾರವಾಗಿ ಮಹೀಂದ್ರಾ ಕಂಪನಿ ವಿಷಾದ ವ್ಯಕ್ತಪಡಿಸಿದೆ. ರೈತ ರೈತ ಕೆಂಪೇಗೌಡ ಅವರಿಗೆ ವಾಹನ ಕಳುಹಿಸಿರುವುದಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

‘ಕರ್ನಾಟಕದ ತುಮಕೂರಿನಲ್ಲಿರುವ ನಮ್ಮ ಡೀಲರ್‌ಗಳ ಷೋ ರೂಂ ಒಂದರಲ್ಲಿ ನಡೆದ ಘಟನೆಯ ಉಲ್ಲೇಖದೊಂದಿಗೆ ಅಧಿಕೃತ ಅಪ್‌ಡೇಟ್ ಇಲ್ಲಿದೆ’ ಎಂದು ಮಹೀಂದ್ರಾ ಟ್ವೀಟ್ ಮಾಡಿದೆ.

‘ಜನವರಿ 21ರಂದು ಕೆಂಪೇಗೌಡ ಮತ್ತು ಅವರ ಸ್ನೇಹಿತರಿಗೆ ನಮ್ಮ ಷೋ ರೂಂನಲ್ಲಿ ಆದ ಅಡಚಣೆಗೆ ವಿಷಾದಿಸುತ್ತೇವೆ. ಅವರಿಗೆ ನೀಡಿದ್ದ ಭರವಸೆಯಂತೆಯೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಸಮಸ್ಯೆ ಬಗೆಹರಿದಿದೆ. ನಮ್ಮನ್ನು ಆಯ್ಕೆ ಮಾಡಿಕೊಂಡಿರುವುದಕ್ಕಾಗಿ ಕೆಂಪೇಗೌಡ ಅವರಿಗೆ ಧನ್ಯವಾದಗಳು. ಅವರನ್ನು ನಮ್ಮ ಪರಿವಾರಕ್ಕೆ ಸ್ವಾಗತಿಸುತ್ತೇವೆ’ ಎಂದು ಟ್ವೀಟ್‌ನಲ್ಲಿ ಕಂಪನಿ ಉಲ್ಲೇಖಿಸಿದೆ.

ADVERTISEMENT

‘ಡೀಲರ್‌ಗಳು ನಮ್ಮ ಕಂಪನಿಯ ಪ್ರಮುಖ ಪ್ರತಿನಿಧಿಗಳು. ಅವರು ಗ್ರಾಹಕ ಕೇಂದ್ರಿತರಾಗಿ ಹಾಗೂ ಗ್ರಾಹಕರ ಜತೆ ಘನತೆಯಿಂದ ವರ್ತಿಸುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ. ಘಟನೆ ಬಗ್ಗೆ ತನಿಖೆ ನಡೆಸಲಿದ್ದು, ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ನಮ್ಮ ಮುಂಚೂಣಿ ಸಿಬ್ಬಂದಿಗೆ ಆಪ್ತ ಸಮಾಲೋಚನೆ, ತರಬೇತಿ ನೀಡಲಿದ್ದೇವೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಂಪನಿ ಉಲ್ಲೇಖಿಸಿದೆ.

ನಡೆದಿದ್ದೇನು?

ಕಾರು ಖರೀದಿಸಲೆಂದು ಇತ್ತೀಚೆಗೆ ತುಮಕೂರಿನ ಷೋ ರೂಂಗೆ ಬಂದಿದ್ದ ಯುವಕನ ವೇಷ ಭೂಷಣ ನೋಡಿದ್ದ ಸಿಬ್ಬಂದ ‘ನಿನ್ನಿಂದ ₹10 ಕೊಡೋಕೆ ಆಗಲ್ಲ. ನೀನು ಕಾರು ಖರೀದಿಸುತ್ತೀಯಾ?’ ಎಂದು ಅವಮಾನಿಸಿದ್ದರು.

ಹೆಬ್ಬೂರು ಹೋಬಳಿಯ ರಾಮನಪಾಳ್ಯದ ನಿವಾಸಿ ಕೆಂಪೇಗೌಡ ಕಾರು ಖರೀದಿಸಲು ನಗರದಲ್ಲಿರುವ ಷೋ ರೂಂಗೆ ಭೇಟಿ ನೀಡಿದ್ದರು. ಅವರ ಬಟ್ಟೆ ಮತ್ತು ಜತೆಗಿರುವ ಸ್ನೇಹಿತರನ್ನು ನೋಡಿ ಅಲ್ಲಿನ ಸಿಬ್ಬಂದಿ ‘ನಿನಗೆ ₹10 ನೀಡುವ ಯೋಗ್ಯತೆಯಿಲ್ಲ’ ಎಂದು ಹೀಯಾಳಿಸಿದ್ದರು. ‘₹10 ಲಕ್ಷ ತಂದರೆ ಕಾರು ಕೊಡುತ್ತೇವೆ‘ ಎಂದು ಷೋ ರೂಂನಿಂದ ವಾಪಸ್‌ ಕಳುಹಿಸಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ಯುವಕ, ಅರ್ಧ ಗಂಟೆಯಲ್ಲಿ ₹10 ಲಕ್ಷ ಹಣ ಹೊಂದಿಸಿಕೊಂಡು ಹಿಂದಿರುಗಿದ್ದರು.

‘ದೊಡ್ಡ ಮೊತ್ತದ ನಗದು ಒಂದೇ ಬಾರಿ ಸ್ವೀಕರಿಸಲು ಸಾಧ್ಯವಿಲ್ಲ. ಈಗಾಗಲೇ ಆರ್‌ಟಿಒ ಕಚೇರಿ ಅವಧಿ ಮುಗಿದಿದ್ದರಿಂದ ಕಾರು ನೀಡಲು ಆಗುವುದಿಲ್ಲ’ ಎಂದು ಸಿಬ್ಬಂದಿ ತಿಳಿಸಿದ್ದರು. ಕೆಂಪೇಗೌಡ ತಮಗೆ ಅವಮಾನ ಮಾಡಿದ ಷೋ ರೂಂ ಸಿಬ್ಬಂದಿಯ ವರ್ತನೆಯನ್ನು ಖಂಡಿಸಿದ್ದರು. ಬಳಿಕ ಸಿಬ್ಬಂದಿ ಕ್ಷಮೆಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.