
ಮಂಗಳೂರು: ಕೇರಳ ಸರ್ಕಾರ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸಿ ಮಂಡಿಸಿರುವ ಭಾಷಾ ಮಸೂದೆಯಿಂದ ಕಾಸರಗೋಡು ಪ್ರದೇಶಕ್ಕೆ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳ ಸರ್ಕಾರದ ಮಸೂದೆ ಸಂವಿಧಾನಬಾಹಿರ ಮತ್ತು ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ವಿರೋಧಿ. ಹೀಗಾಗಿ ಮಧ್ಯಪ್ರವೇಶ ಮಾಡುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದರು.
‘ಭೌಗೋಳಿಕವಾಗಿ ಕಾಸರಗೋಡು ಕೇರಳದಲ್ಲಿದ್ದರೂ ಅಲ್ಲಿನ ಕನ್ನಡಿಗರು ಭಾವನಾತ್ಮಕವಾಗಿ ಕರ್ನಾಟದಕ ಭಾಗವಾಗಿದ್ದಾರೆ. ಕನ್ನಡಿಗರು ಸಮಸ್ಯೆ ಎದುರಿಸಿದಾಗಲೆಲ್ಲ ಪ್ರಾಧಿಕಾರ ಧ್ವನಿ ಎತ್ತಿದೆ. ಮಲಯಾಳಂ ಕಡ್ಡಾಯ ಜಾರಿಯಾಗಲು ಬಿಡುವುದಿಲ್ಲ. ಅಲ್ಲಿನ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಮಸೂದೆಗೆ ಸಹಿ ಹಾಕುವುದಿಲ್ಲ ಎಂಬ ವಿಶ್ವಾಸವಿದೆ. 2017ರಲ್ಲಿ ಇದೇ ಮಸೂದೆಗೆ ಸಹಿ ಹಾಕಲು ರಾಷ್ಟ್ರಪತಿ ಹಿಂದೇಟು ಹಾಕಿದ್ದರು’ ಎಂದು ಸೋಮಣ್ಣ ಹೇಳಿದರು.
ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳುಕ್ಕುರಾಯ, ಕನ್ನಡ ಸಾಹಿತ್ಯ ಪರಿಷತ್ ಗಡಿನಾಡು ಕೇರಳ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ, ಕನ್ನಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಕೇಶ್, ಪ್ರದೀಪ್ ಕುಮಾರ್ ಕಲ್ಕೂರ, ಎ.ಆರ್.ಸುಬ್ಬಯ್ಯಕಟ್ಟೆ, ಶಂಕರನಾರಾಯಣ ಭಟ್, ಝಡ್.ಎ ಕಯ್ಯಾರ್ ಪಾಲ್ಗೊಂಡಿದ್ದರು.
ಕನ್ನಡ ಮಾಧ್ಯಮ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ಸಮಿತಿ ಮತ್ತಿತರ ಸಂಘ–ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗದವರು ಮಂಗಳೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.