ADVERTISEMENT

ಸಿಎಂ ಆಗಿ ಎಂದು ಹೈಕಮಾಂಡ್, ರಾಜ್ಯ ನಾಯಕರು ಹೇಳಿಲ್ಲ: ಖರ್ಗೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 18:18 IST
Last Updated 17 ಮೇ 2019, 18:18 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ಹೈಕಮಾಂಡ್ ಆಗಲಿ, ರಾಜ್ಯ ನಾಯಕರಾಗಲಿ ಮುಖ್ಯಮಂತ್ರಿ ಆಗಬೇಕು ಎಂದು ನನಗೆ ಹೇಳಿಲ್ಲ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು’ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ’ ಎಂದರು.

‘ಯಾವುದೋ ಒಂದು ಸಂದರ್ಭದಲ್ಲಿ ಕುಮಾರಸ್ವಾಮಿ ಹಾಗೆ ಹೇಳಿದ್ದಾರೆ. ಅವರ ಹೇಳಿಕೆಗೆ ಪ್ರತಿಯೊಬ್ಬರೂ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಎಲ್ಲರೂ ಹೇಳಿಕೆ ಕೊಡುವುದರಿಂದ ಪಕ್ಷದಲ್ಲಿ ಒಡಕು ಉಂಟಾಗುತ್ತದೆ, ಮೈಮನಸ್ಸು ಬರುತ್ತದೆ. ಹೈಕಮಾಂಡ್ ತೀರ್ಮಾನದಂತೆಯೇ ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ’ ಎಂದರು.

ADVERTISEMENT

‘ಸೋನಿಯಾಗಾಂಧಿ ಅವರು ಕಾಂಗ್ರೆಸ್ ಪಕ್ಷದ ಜತೆ ಗುರುತಿಸಿಕೊಂಡಿರುವ ಪಕ್ಷಗಳ ಮುಖಂಡರನ್ನು ಕರೆದು ಮಾತನಾಡಿದ್ದಾರೆ. ಲೋಕಸಭೆ ಫಲಿತಾಂಶದ ಬಳಿಕ ಸಂಖ್ಯಾಬಲ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಫಲಿತಾಂಶ ಬಂದ ನಂತರವಷ್ಟೇ ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ ಮಾಡುತ್ತೇವೆ. ನಮ್ಮ ಪಕ್ಷದವರೇ ಪ್ರಧಾನಿ ಆಗಬೇಕು ಎಂದಾದರೆ, ಬೇರೆ ಪಕ್ಷಗಳ ನಿಲುವು ಹೇಗಿರುತ್ತದೊ ನೋಡಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಳಿನ್ ವಿರುದ್ಧ ಆಕ್ರೋಶ: ‘ನಾಥುರಾಮ್ ಗೋಡ್ಸೆ ಕೊಂದಿದ್ದು ಗಾಂಧಿಯನ್ನ, ರಾಜೀವ್ ಗಾಂಧಿ ಕೊಂದಿದ್ದು 17 ಸಾವಿರ ಜನರನ್ನ’ ಎಂಬ ನಳಿನ್ ಕುಮಾರ್ ಕಟೀಲ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಖರ್ಗೆ, ‘ಇಂತಹ ಮಾತುಗಳಿಂದ ಅವರ ಮನಸ್ಥಿತಿ ಅರ್ಥವಾಗುತ್ತದೆ. ರಾಜೀವ್ ಗಾಂಧಿ ದೇಶದ ಐಕ್ಯತೆಗಾಗಿ ತಮ್ಮ ಪ್ರಾಣ ಕೊಟ್ಟಿದ್ದಾರೆ. ಕಟಿಲ್‌ನಂತಹ ಜನರ ಸಂಖ್ಯೆ ಹಾಗೂ ಅಂಥವರ ವಿಚಾರಧಾರೆ ಹೆಚ್ಚಾಗುತ್ತಿರುವುದರಿಂದ ದೇಶಕ್ಕೆ ತೊಂದರೆಯಾಗುತ್ತಿದೆ. ಇನ್ನು ಮುಂದೆಯಾದರೂ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಬೇಕು. ಗಾಂಧಿ ಅವರನ್ನು ಕೊಲೆ ಮಾಡಿದವರನ್ನು ಬಿಜೆಪಿಯವರು ದೇವರು ಎಂದು ಪೂಜಿಸುವುದು ದುರದೃಷ್ಟಕರ’ ಎಂದು ಖಾರವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.