
ಕಾಳಿಂಗ ಸರ್ಪಚಿತ್ರ
ವೈಲ್ಡ್ ಕರ್ನಾಟಕ
ಬೆಂಗಳೂರು:‘ಮಲೆನಾಡಿನಲ್ಲಿ ಇತರೆ ಸಮುದಾಯಗಳಂತೆ ಮುಸ್ಲಿಂ ಮತ್ತು ಕ್ರೈಸ್ತರು ಪ್ರಕೃತಿಯ ಜತೆ ಸಹ ಜೀವನ ನಡೆಸುತ್ತಾ ಬಂದಿದ್ದಾರೆ. ಸರ್ಪಗಳನ್ನು ಪೂಜಿಸುವ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ಬಂದಿದ್ದಾರೆ’ ಎಂದು ‘ಪರಿಸರ ಸಂವಾದ’ದ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ತೀರ್ಥಹಳ್ಳಿ ತಿಳಿಸಿದ್ದಾರೆ.
ಆಗುಂಬೆಯ 'ಕಾಳಿಂಗ ಮನೆ’ ಸಂಸ್ಥೆ ‘ಪ್ರಜಾವಾಣಿ’ಗೆ ನೀಡಿರುವ ಸ್ಪಷ್ಟನೆಯಲ್ಲಿ, ‘ಮಲೆನಾಡಿನ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಹಾವಿನೊಂದಿಗೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಯನ್ನಾಗಲಿ, ಪೂಜನೀಯ ಭಾವನೆಯನ್ನು ಹೊಂದಿಲ್ಲ. ತಮಗೆ ವಿಪತ್ತು ಬಂದಾಗ ಯಾವುದೇ ಹಾವನ್ನಾದರೂ ಕೊಲ್ಲಲು ಅವರು ಸಿದ್ಧರಾಗುತ್ತಾರೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಇದು ಖಂಡನೀಯ’ ಎಂದಿದ್ದಾರೆ.
‘ಯಾವುದೇ ದಾಖಲೆಗಳಿಲ್ಲದೆ ವೈಯಕ್ತಿಕ ಸ್ವಾರ್ಥಕ್ಕಾಗಿ ಸಮುದಾಯಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಧಾರ್ಮಿಕ ದ್ವೇಷ ಬಿತ್ತುವ ಪ್ರಯತ್ನ ಕೂಡಾ ಇಲ್ಲಿ ಕಾಣುತ್ತಿದೆ. ಈ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಮಲೆನಾಡಿಗರಿಗೆ ಕಾಳಿಂಗ ಸರ್ಪಗಳ ಬಗೆಗೆ ಭಯ, ಭಕ್ತಿ ಇದ್ದು ಪೂಜಿಸುವ ಸಂಸ್ಕೃತಿ ಇದೆ. ಯಾರೂ ಕೂಡಾ ಕಾಳಿಂಗ ಸರ್ಪಗಳನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಇವರ ಸುಳ್ಳು ಸಂಶೋಧನೆಗೆ ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಕಾಳಿಂಗ ಮನೆ ತಮ್ಮ ಸುಳ್ಳುಗಳ ಸಮರ್ಥನೆಗೆ ಪುನಃ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಾ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವ ಎಲ್ಲ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.