
ಬೆಂಗಳೂರು: ‘ಪಶ್ಚಿಮ ಘಟ್ಟದ ನದಿಗಳಿಗೆ ಕಸಾಯಿಖಾನೆ ಮತ್ತು ಆಸ್ಪತ್ರೆಗಳ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಡಿ.ಎಸ್.ಅರುಣ್ ಅವರು ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ಪರಿಷತ್ತಿನ ಕಲಾಪದ ಶೂನ್ಯವೇಳೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದರು.
‘ಮೊದಲು ಇಂತಹ ಸಮಸ್ಯೆ ಇರಲಿಲ್ಲ. ವರ್ಷದ ಹಿಂದೆ ಇದು ಆರಂಭವಾಗಿದ್ದು, ಈಗ ವಿಪರೀತ ಎನಿಸುವಷ್ಟಾಗಿದೆ. ತುಂಗಾ, ಭದ್ರಾ ಮತ್ತು ಶರಾವತಿ ನದಿಗಳಿಗೆ ತ್ಯಾಜ್ಯ ಸುರಿಯುವುದು ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರದ ನಿರ್ಲಕ್ಷ್ಯದ ಕಾರಣದಿಂದಲೇ ಹೀಗಾಗಿದೆ’ ಎಂದು ಆರೋಪಿಸಿದರು.
‘ಮಲೆನಾಡಿನ ಪ್ರವಾಸಿ ತಾಣಗಳಿಗೆ ಈಚಿನ ದಿನಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಪ್ರವಾಸಿಗರ ನಿಯಂತ್ರಣಕ್ಕೆ ಮತ್ತು ಆ ಸ್ಥಳಗಳ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇಲ್ಲ. ಇದರಿಂದಾಗಿ ಎಲ್ಲ ಪ್ರವಾಸಿ ತಾಣಗಳೂ ಕಸದ ತೊಟ್ಟಿಗಳಂತಾಗಿವೆ. ಚಾರ್ಮಾಡಿ ಮತ್ತು ಆಗುಂಬೆ ಘಾಟಿಯ ತಿರುವುಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು, ಮದ್ಯದ ಬಾಟಲಿಗಳು ರಾಶಿ ರಾಶಿ ಬಿದ್ದಿವೆ. ಇದನ್ನು ನಿಯಂತ್ರಿಸಲು ಸರ್ಕಾರವು ತಕ್ಷಣವೇ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.