ADVERTISEMENT

ವಿದ್ಯಾವಂತ ಯುವತಿಯರಲ್ಲೂ ಅಪೌಷ್ಟಿಕತೆ..!

ತಪಾಸಣೆಗೊಳಪಟ್ಟ 54 ಯುವತಿಯರಲ್ಲಿ 44 ವಿದ್ಯಾರ್ಥಿನಿಯರ ಹಿಮೊಗ್ಲೋಬಿನ್ 10ಕ್ಕಿಂತಲೂ ಕಡಿಮೆ

ಡಿ.ಬಿ, ನಾಗರಾಜ
Published 5 ನವೆಂಬರ್ 2018, 19:27 IST
Last Updated 5 ನವೆಂಬರ್ 2018, 19:27 IST
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿನಿಯೊಬ್ಬರ ಹಿಮೊಗ್ಲೋಬಿನ್‌ ತಪಾಸಣೆ ನಡೆಸಿದ ವೈದ್ಯೆ ಸಾವಿತ್ರಿ ಎಚ್ಚಿಪ್ರಜಾವಾಣಿ ಚಿತ್ರ
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿನಿಯೊಬ್ಬರ ಹಿಮೊಗ್ಲೋಬಿನ್‌ ತಪಾಸಣೆ ನಡೆಸಿದ ವೈದ್ಯೆ ಸಾವಿತ್ರಿ ಎಚ್ಚಿಪ್ರಜಾವಾಣಿ ಚಿತ್ರ   

ವಿಜಯಪುರ: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕಲಿಯುತ್ತಿರುವ ಯುವತಿಯರಲ್ಲಿ ಅಪೌಷ್ಟಿಕತೆ ಹೆಚ್ಚಿನ ಪ್ರಮಾಣದಲ್ಲಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 2017ರ ಮಾರ್ಚ್‌ 8ರಂದು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ನಡೆಸಿದ ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಇದು ಪತ್ತೆಯಾಗಿತ್ತು.

ಈ ಶಿಬಿರದಲ್ಲಿ 321 ಯುವತಿಯರು ತಪಾಸಣೆಗೊಳಪಟ್ಟಿದ್ದಾರೆ. ಇದರಲ್ಲಿ 54 ಯುವತಿಯರ ಹಿಮೊಗ್ಲೋಬಿನ್‌ ಪರೀಕ್ಷೆಗೊಳಪಡಿಸಿದ ಸಂದರ್ಭ 44 ವಿದ್ಯಾರ್ಥಿನಿಯರ ರಕ್ತದಲ್ಲಿ 10ಕ್ಕಿಂತಲೂ ಕಡಿಮೆಯಿರುವುದು ದಾಖಲಾಗಿದೆ.

ADVERTISEMENT

ಇದೇ ಶಿಬಿರದಲ್ಲಿ ಜಯಮ್ಮ ಎಂಬ ಸಂಶೋಧನಾ ವಿದ್ಯಾರ್ಥಿಯ ಹಿಮೊಗ್ಲೋಬಿನ್‌ 6.6ರಷ್ಟು ದಾಖಲಾಗಿರುವುದು ಅತ್ಯಂತ ಕಡಿಮೆ. 8ರಷ್ಟು ಹಿಮೊಗ್ಲೋಬಿನ್‌ ಹೊಂದಿರುವ ವಿದ್ಯಾರ್ಥಿನಿಯರ ಸಂಖ್ಯೆ ನಾಲ್ಕಕ್ಕೂ ಹೆಚ್ಚಿದೆ. ಉಳಿದವರು 9, 10ರಷ್ಟು ಹೊಂದಿರುವುದು ಪತ್ತೆಯಾಗಿತ್ತು ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ತಿಂಗಳಲ್ಲಿ 15 ಮಂದಿಗೆ ಕೊರತೆ..!

‘ಹಿಂದಿನ ವರ್ಷ ನಡೆದ ಶಿಬಿರದಲ್ಲಿ ಹಿಮೊಗ್ಲೋಬಿನ್‌ ಯುವತಿಯರಲ್ಲಿ ಕಡಿಮೆಯಿರುವುದು ಬೆಳಕಿಗೆ ಬರುತ್ತಿದ್ದಂತೆ; ವಿಶ್ವವಿದ್ಯಾಲಯದ ಆವರಣದಲ್ಲಿರುವ ಆರೋಗ್ಯ ಕೇಂದ್ರಕ್ಕೆ ತಪಾಸಣೆಗಾಗಿ ಬರುವವರನ್ನು ಕಡ್ಡಾಯವಾಗಿ ‘ಪ್ಯಾಲರ್‌’ (ಕಣ್ಣಿನ ತಪಾಸಣೆ ಮೂಲಕ ಹಿಮೊಗ್ಲೋಬಿನ್‌ ಪತ್ತೆ ಹಚ್ಚುವುದು) ಪರೀಕ್ಷೆಗೊಳಪಡಿಸುತ್ತೇವೆ’ ಎಂದು ವೈದ್ಯೆ ಸಾವಿತ್ರಿ ಎಚ್ಚಿ ತಿಳಿಸಿದರು.

‘ಪ್ಯಾಲರ್ ಪರೀಕ್ಷೆಯಲ್ಲಿ ಅನುಮಾನ ವ್ಯಕ್ತವಾದರೆ, ಹಿಮೊಗ್ಲೋಬಿನ್‌ ಮೀಟರ್‌ ಮೂಲಕ ರಕ್ತ ತಪಾಸಿಸಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. 12ರೊಳಗಿದ್ದರೆ ಪೂರಕ ಮಾತ್ರೆ ನೀಡುವ ಜತೆ, ಸೂಕ್ತ ಆಹಾರ ಸೇವನೆಯ ಸಲಹೆ ನೀಡುತ್ತೇವೆ’ ಎಂದು ಅವರು ಹೇಳಿದರು.

‘ನಮ್ಮ ಆರೋಗ್ಯ ಕೇಂದ್ರಕ್ಕೆ ನಿತ್ಯ 40ರಿಂದ 60 ವಿದ್ಯಾರ್ಥಿನಿಯರು ತಪಾಸಣೆಗೆ ಬರುತ್ತಾರೆ. ತಿಂಗಳಲ್ಲಿ ಕನಿಷ್ಠ 15 ಮಂದಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹಿಮೊಗ್ಲೋಬಿನ್‌ ಹೊಂದಿರುವವರು ಪತ್ತೆಯಾಗುತ್ತಾರೆ’ ಎಂದು ತಿಳಿಸಿದರು.

ಹಾಸ್ಟೆಲ್‌ನಲ್ಲಿ ಸೀಮಿತ ಊಟ; ಆರೋಪ

‘ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳಲ್ಲಿ ಈ ಹಿಂದೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದರು. ತಿಂಗಳ ಕೊನೆಯಲ್ಲಿ ಖರ್ಚನ್ನು ಎಲ್ಲರಿಗೂ ಸಮಪಾಲಾಗಿ ವಿಭಜಿಸುತ್ತಿದ್ದರು. ಆದರೆ ಈಚೆಗೆ ಕ್ಯಾಂಟೀನ್‌ ನಡೆಸುವುದನ್ನು ಗುತ್ತಿಗೆ ನೀಡಿದ್ದಾರೆ. ಪ್ರತಿಯೊಬ್ಬರಿಂದ ಮಾಸಿಕ ₹ 1500 ಶುಲ್ಕವನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಿದ್ದಾರೆ.

ಆದರೆ ಗುಣಮಟ್ಟದ ಊಟ ನೀಡಲ್ಲ. ಎರಡು ಚಪಾತಿ, ಅನ್ನ–ಸಾಂಬಾರ್‌ ಅಷ್ಟೇ ನೀಡುತ್ತಾರೆ. ಇದರಿಂದ ಹೊಟ್ಟೆ ತುಂಬಲ್ಲ. ಹೆಚ್ಚಿಗೆ ಬಡಿಸಿ ಎಂದರೂ ಬಡಿಸಲ್ಲ. ವಾರಕ್ಕೊಮ್ಮೆ ನಿಯಮಿತವಾಗಿ ಕೋಳಿ ಮೊಟ್ಟೆ, ಬಾಳೆಹಣ್ಣು, ಸಿಹಿ ತಿನಿಸು ಕೊಡಲ್ಲ. 15 ದಿನಕ್ಕೊಮ್ಮೆ ಮಾಂಸಹಾರ ಬಡಿಸುತ್ತಾರಷ್ಟೇ’ ಎಂದು ಎಂ.ಫಿಲ್‌ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿನಿಯರಿಬ್ಬರು ‘ಪ್ರಜಾವಾಣಿ’ ಬಳಿ ಹಾಸ್ಟೆಲ್‌ ಅವ್ಯವಸ್ಥೆಯನ್ನು ಇಂಚಿಂಚು ಬಿಚ್ಚಿಟ್ಟರು.

‘ಅಡುಗೆಗೆ ಸೋಡಾ ಬಳಸುತ್ತಾರೆ. ಇದರಿಂದ ತಿನ್ನಲು ಆಗಲ್ಲ. ಟೆಂಡರ್‌ ಪಡೆದವರು ಲಾಭದ ಉದ್ದೇಶದಿಂದ ಅಡುಗೆ ಮಾಡಿಸುತ್ತಾರೆ ಹೊರತು; ಕಾಳಜಿಯಿರಲ್ಲ. ದಿನಾಲೂ ಚಪಾತಿ ಊಟವೇ ನಮಗೆ ಗತಿ. ಏನನ್ನೂ ಪ್ರಶ್ನಿಸುವಂತಿಲ್ಲ. ಹೆಚ್ಚಿಗೆ ಕೇಳಿದರೇ ನಾವೇ ಟಾರ್ಗೆಟ್‌. ಎಲ್ಲದರಲ್ಲೂ ನಮ್ಮನ್ನು ಶೋಷಿಸಲು ಶುರು ಮಾಡುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ತೆರಳಿದಾಗ ಹಿಮೊಗ್ಲೋಬಿನ್ ಪರೀಕ್ಷೆ ನಡೆಸುತ್ತಾರೆ. 12ಕ್ಕಿಂತಲೂ ಕಡಿಮೆ ಇರುವುದು ಪತ್ತೆಯಾದರೂ ನಾಲ್ಕೈದು ಮಾತ್ರೆ ಕೊಡುತ್ತಾರಷ್ಟೇ. ಹೆಚ್ಚಿಗೆ ಕೇಳಿದರೆ ಅನತಿ ದೂರದಲ್ಲಿರುವ ಅಲ್‌ಅಮೀನ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.

15 ವರ್ಷದಿಂದ ಜಾಗೃತಿ

‘ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 15 ವರ್ಷದಿಂದ ಅಪೌಷ್ಟಿಕತೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಆಹಾರ ಪದ್ಧತಿ, ಸಾಮಾಜಿಕ–ಆರ್ಥಿಕ ಸ್ಥಿತಿಗತಿಯೂ ಇದಕ್ಕೆ ಪ್ರಮುಖ ಕಾರಣವಾಗಿದೆ’ ಎನ್ನುತ್ತಾರೆ ಕುಲಸಚಿವೆ ಪ್ರೊ.ಆರ್‌.ಸುನಂದಮ್ಮ.

‘ನಮ್ಮಲ್ಲಿ ಕನಿಷ್ಠ 22ರಿಂದ 25 ವಯೋಮಾನದ ಯುವತಿಯರೇ ವ್ಯಾಸಂಗಕ್ಕೆ ಬಂದಿರುತ್ತಾರೆ. ಇವರಲ್ಲಿ ಹಿಮೊಗ್ಲೋಬಿನ್‌ ಪ್ರಮಾಣ ಕಡಿಮೆಯಾದರೆ ಭವಿಷ್ಯದಲ್ಲಿ ಹಲ ಸಮಸ್ಯೆಗಳು ಕಾಡುತ್ತವೆ. ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರಲಿದೆ. ಹೆರಿಗೆ ಸಂದರ್ಭ ತಾಯಿ ಸಾವು ಸಂಭವಿಸಬಹುದು. ಗರ್ಭಪಾತಕ್ಕೀಡಾಗಬಹುದು. ಇದಕ್ಕಾಗಿ ಎಲ್ಲ ತರಗತಿಗಳಲ್ಲೂ ಗರ್ಭಿಯಾಗುವ ಮುನ್ನ ಹಿಮೊಗ್ಲೋಬಿನ್‌ ಪರೀಕ್ಷೆಗೊಳಪಡಿ ಎಂಬ ಕಿವಿಮಾತನ್ನು ವಿದ್ಯಾರ್ಥಿನಿಯರಿಗೆ ಹೇಳುವೆ’ ಎಂದು ಅವರು ತಿಳಿಸಿದರು.

‘ವಿಶ್ವವಿದ್ಯಾಲಯದ 31 ವಿಭಾಗದಲ್ಲೂ 2004ರಿಂದ ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದಂತೆ 100 ಅಂಕಗಳ ವಿಷಯವನ್ನು ಕಡ್ಡಾಯಗೊಳಿಸಲಾಗಿದೆ. ಎರಡನೇ ಸೆಮಿಸ್ಟರ್‌ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿ ಇದನ್ನು ಪಡೆಯಬೇಕು.

ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕಾಂಶ ವಿಭಾಗದ ವತಿಯಿಂದ ಎಲ್ಲ ತರಗತಿಗಳಲ್ಲೂ ಆಹಾರ ಕ್ರಮ, ಅಪೌಷ್ಟಿಕತೆ, ಅದರಿಂದಾಗುವ ದುಷ್ಪರಿಣಾಮಗಳ ಕುರಿತಂತೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ’ ಎಂದು ಕುಲ ಸಚಿವರು ಮಾಹಿತಿ ನೀಡಿದರು.

ಹಿಮೊಗ್ಲೋಬಿನ್‌ ಕಡಿಮೆ ಇರುವ ವಿದ್ಯಾರ್ಥಿನಿಯರಿಗೆ ಶೇಂಗಾ ಉಂಡೆ ತಿನ್ನಿ. ಹಸಿರು ತರಕಾರಿ ಬಳಸಿ ಎಂದು ಸಲಹೆ ನೀಡುತ್ತೇವೆ. ಆದರೆ ಅವರು ಕುರುಕಲು ತಿಂಡಿಯನ್ನೇ (ಚೈನೀಸ್‌ ಫುಡ್‌) ಇಷ್ಟಪಟ್ಟು ತಿನ್ನುತ್ತಾರೆ
-ಡಾ.ಸಾವಿತ್ರಿ ಎಚ್ಚಿ

ಅಪೌಷ್ಟಿಕತೆ ನಿವಾರಣೆಗಾಗಿ ಹಾಸ್ಟೆಲ್‌ಗಳಲ್ಲಿ ಪೌಷ್ಟಿಕ ಆಹಾರವನ್ನು ಹಿಂದಿನ ವರ್ಷದಿಂದಲೇ ಕಡ್ಡಾಯಗೊಳಿಸಿದ್ದೇವೆ. ಹಾಲು–ಮೊಸರು, ಮೊಟ್ಟೆ, ಬಾಳೆಹಣ್ಣು, ಮಾಂಸಹಾರ ಸಹ ಕೊಡುತ್ತಿದ್ದೇವೆ
ಪ್ರೊ.ಸಬಿಹಾ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.