ADVERTISEMENT

ಹಲಗೂರು: ಕಾಡಾನೆ ದಾಳಿಗೆ ವೃದ್ಧ ಬಲಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 11:43 IST
Last Updated 12 ಮಾರ್ಚ್ 2021, 11:43 IST
ಮುನಿ ನಂಜಯ್ಯ
ಮುನಿ ನಂಜಯ್ಯ   

ಹಲಗೂರು (ಮಂಡ್ಯ ಜಿಲ್ಲೆ): ಶಿವರಾತ್ರಿ ಜಾಗರಣೆ ಅಂಗವಾಗಿ ಗುರುವಾರ ರಾತ್ರಿ ದೇವಾಲಯಕ್ಕೆ ತೆರಳುತ್ತಿದ್ದ ಸಮೀಪದ ಸೊಲಬರದೊಡ್ಡಿ ಗ್ರಾಮದ ವೃದ್ಧರೊಬ್ಬರ ಕಾಡಾನೆ ದಾಳಿ ನಡೆಸಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುನಿನಂಜಯ್ಯ (65) ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಗ್ರಾಮದ ಹೊರವಲಯದಲ್ಲಿರುವ ಬಸವೇಶ್ವರ ದೇವಾಲಯಕ್ಕೆ ಅವರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ. ಹಿಂದೆ ಬರುತ್ತಿದ್ದ ಜನರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆನೆ ದಾಳಿಯ ರಭಸಕ್ಕೆ ಮುನಿನಂಜಯ್ಯ ಪಕ್ಕದ ಕಾಲುವೆಯಲ್ಲಿ ಬಿದ್ದಿದ್ದಾರೆ. ಅವರ ಎರಡು ಕಾಲುಗಳೂ ಮುರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸೊಲಬರದೊಡ್ಡಿ ಹಲಗೂರು ವ್ಯಾಪ್ತಿಯ ಅರಣ್ಯದ ನಡುವೆ ಇದ್ದು ಕಾಡು ಪ್ರಾಣಿಗಳ ಭೀತಿ ಹೆಚ್ಚಾಗಿದೆ. ಕತ್ತಲಲ್ಲಿ ಬ್ಯಾಟರಿ ಸಹಾಯವಿಲ್ಲದೇ ತೆರಳುತ್ತಿದ್ದ ಕಾರಣ ಆನೆ ಬರುವುದು ತಿಳಿದಿಲ್ಲ. ಬಿಳಿ ಅಂಗಿ, ಪಂಚೆ ತೊಟ್ಟಿದ್ದ ವ್ಯಕ್ತಿ ಸುಲಭವಾಗಿ ಆನೆ ದಾಳಿಗೆ ತುತ್ತಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಇಲಾಖೆ ವತಿಯಿಂದ ಮುನಿನಂಜಯ್ಯ ಕುಟುಂಬ ಸದಸ್ಯರಿಗೆ ₹ 2 ಲಕ್ಷದ ಪರಿಹಾರ ಚೆಕ್‌ ವಿತರಣೆ ಮಾಡಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸೊಲಬರ ದೊಡ್ಡಿ ಗ್ರಾಮದ ಜನರು ಕೃಷಿಕರಾಗಿದ್ದು ಅಪಾಯದ ಜೊತೆಯಲ್ಲೇ ಬದುಕುತ್ತಿದ್ದಾರೆ. ಜಮೀನಿನ ಆರ್‌ಟಿಸಿ ಅವರ ಹೆಸರಿನಲ್ಲಿ ಇಲ್ಲದಿದ್ದರೂ ಕೃಷಿ ಮಾಡುಸುತ್ತಿದ್ದಾರೆ. ಗ್ರಾಮದ ಸಮೀಪದಲ್ಲೇ ಅರಣ್ಯ ಇಲಾಖೆ ಕ್ಯಾಂಪ್‌ ಕೂಡ ಇದೆ. ರಾತ್ರಿ ವೇಳೆ ಎಚ್ಚರಿಕೆಯಿಂದ ಓಡಾಡುವಂತೆ ಜನರಿಗೆ ಎಚ್ಚರಿಕೆ ನೀಡಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.