ADVERTISEMENT

ಸಾರ್ವಜನಿಕ ಆಸ್ತಿ ಬಳಸಲು ಪೂರ್ವಾನುಮತಿ ಕಡ್ಡಾಯ: ಆದೇಶ ಸೀಮಿತಕ್ಕೆ ನಕಾರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 23:47 IST
Last Updated 18 ನವೆಂಬರ್ 2025, 23:47 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂಬ ಆದೇಶದ ಅನುಷ್ಠಾನಕ್ಕೆ ನೀಡಲಾಗಿರುವ ಮಧ್ಯಂತರ ತಡೆ ಆದೇಶವನ್ನು ಪ್ರಕರಣದ ಅರ್ಜಿದಾರರಿಗೆ ಮಾತ್ರವೇ ಸೀಮಿತಗೊಳಿಸಬೇಕು’ ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟ್‌ ಸಾರಾಸಗಟಾಗಿ ತಳ್ಳಿ ಹಾಕಿದೆ.

ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಪ್ರಶ್ನಿಸಿ ಹುಬ್ಬಳ್ಳಿಯ, ‘ಪುನಃಶ್ಚೇತನ ಸೇವಾ ಸಂಸ್ಥೆ’ ಅಧ್ಯಕ್ಷ ವಿನಾಯಕ ಮತ್ತು ‘ವಿ ಕೇರ್ ಫೌಂಡೇಶನ್’ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್‌ ಚವಾಣ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ತನ್ನ ನಿಲುವನ್ನು ಸರ್ಕಾರಕ್ಕೆ ಸ್ಪಷ್ಟಪಡಿಸಿತು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರನ್ನು ನ್ಯಾಯಪೀಠ, ‘ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿಲ್ಲವೇ’ ಎಂದು ಪ್ರಶ್ನಿಸಿತು.

ADVERTISEMENT

ಇದಕ್ಕೆ ಶಶಿಕಿರಣ ಶೆಟ್ಟಿ, ‘ಈ ವಿಚಾರ ಸರ್ಕಾರದ ಮಟ್ಟದಲ್ಲ ಚರ್ಚೆಯಾಗುತ್ತಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಮತ್ತು ಪ್ರಕರಣದಲ್ಲಿನ ಮಧ್ಯಂತರ ತಡೆ ಆದೇಶವನ್ನು ಅರ್ಜಿದಾರರಿಗೆ ಮಾತ್ರವೇ ಸೀಮಿತಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ನ್ಯಾಯಪೀಠ, ‘ಇದು ಸರ್ಕಾರದ ಆದೇಶವಾಗಿರುವ ಕಾರಣ ಹಾಗೆ ಮಾಡಲಾಗದು. ಅದಾಗ್ಯೂ, ನಿಮ್ಮ ವಾದವನ್ನು ಪರಿಗಣಿಸಲಾಗುವುದು’ ಎಂದು ಅಡ್ವೊಕೇಟ್‌ ಜನರಲ್‌ ಮನವಿ ಅನುಸಾರ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿಸೆಂಬರ್‌ 15ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.