ADVERTISEMENT

ಮಂಡ್ಯ ‘ಕೈ’ ನಾಯಕರು ಗರಂ

ಜೆಡಿಎಸ್‌ ಜೊತೆ ಜಂಟಿ ಪ್ರಚಾರಕ್ಕೆ ಮುಖಂಡರ ಅಪಸ್ವರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 20:20 IST
Last Updated 17 ಅಕ್ಟೋಬರ್ 2018, 20:20 IST
Congress-Logo.jpg
Congress-Logo.jpg   

ಬೆಂಗಳೂರು: ‘ಜೆಡಿಎಸ್ ನಾಯಕರು ನಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುತ್ತಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಮಂಡ್ಯ ಕಾಂಗ್ರೆಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಾಯಕರು, ‘ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ’ ಎಂದು ಸಿಟ್ಟುಹೊರ ಹಾಕಿದ್ದಾರೆ.

‘ನಾವು ಯಾಕೆ ಜೆಡಿಎಸ್‌ ನಾಯಕರ ಜೊತೆ ಪ್ರಚಾರ ಮಾಡಬೇಕು’ ಎಂದು ಬೇಸರ ಹೊರಹಾಕಿದ ಚೆಲುವರಾಯಸ್ವಾಮಿ, ‘ಕಾರ್ಯಕರ್ತರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದೂ ಹೇಳಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ಈ ಪರಿಸ್ಥಿತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ಸಿಗಲ್ಲ. ನಾವು ಯಾರೂ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ಚೆಲುವರಾಯಸ್ವಾಮಿ ಮತ್ತು ನರೇಂದ್ರ ಸ್ವಾಮಿ ನೇರವಾಗಿಯೇ ಹೇಳಿದ್ದಾರೆ.

ಅದಕ್ಕೆ ದಿನೇಶ್‌, ‘ಹೈಕಮಾಂಡ್ ತೀರ್ಮಾನದಂತೆ ಜೆಡಿಎಸ್‌ಗೆ ಮಂಡ್ಯ ಬಿಟ್ಟುಕೊಟ್ಟಿದ್ದೇವೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಮೈತ್ರಿ ಮಾಡಿಕೊಳ್ಳಲಾಗಿದೆ. ನಾವುಬೆಂಬಲಿಸಲೇಬೇಕು’ ಎಂದು ಸಮಜಾಯಿಷಿ ನೀಡಿದ್ದಾರೆ.

‘ಸಾಧಕಬಾಧಕಗಳ ಬಗ್ಗೆ ಮುಂದೆ ಚರ್ಚೆ ಮಾಡೋಣ. ಜೊತೆಯಾಗಿ ಪ್ರಚಾರಕ್ಕೆ ಹೋಗದೇ ಇದ್ದರೂ ಗೊಂದಲ ಉಂಟಾಗದಂತೆ ನೋಡಿಕೊಳ್ಳಿ’ ಎಂದೂಸಮಾಧಾನಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಚೆಲುವರಾಯ ಸ್ವಾಮಿ, ‘ನಮಗೆ ಕುಮಾರಸ್ವಾಮಿಗಿಂತ ಪಕ್ಷ ಮುಖ್ಯ. ಈಗ ನಾವು ಎಲ್ಲವನ್ನು ಮರೆತು ಎಷ್ಟು ಅಗತ್ಯವಿದೆಯೋ ಅಷ್ಟು ಕೆಲಸ ಮಾಡುತ್ತೇವೆ. ಮುಂದೆ ನಮ್ಮ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕೆಂದು ಗೊತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.