ADVERTISEMENT

ಮಂಡ್ಯ: ತಂದೆ, ತಾಯಿ ಕೊಂದು ನದಿಗೆ ಹಾರಿದವನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 13:29 IST
Last Updated 11 ಜೂನ್ 2020, 13:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀರಂಗಪಟ್ಟಣ: ತಂದೆ ಮತ್ತು ತಾಯಿಯನ್ನು ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಬುಧವಾರ ರಾತ್ರಿ ಕಾವೇರಿ ನದಿಗೆ ಹಾರಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದ (ರಂಗನಾಥನಗರ) ಎಂ.ಸಂತೋಷ್‌ (35) ಎಂಬಾತ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ. ನದಿಯಲ್ಲಿ ಕಡಿಮೆ ನೀರಿದ್ದ ಕಾರಣ ಆತನ ಎಡಗಾಲು ಮುರಿದಿದೆ. ಮಂಡ್ಯದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೃತ್ತಿಯಲ್ಲಿ ಆತ ಲೆಕ್ಕಪರಿಶೋಧಕನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬುಧವಾರ ನಸುಕಿನ 3 ಗಂಟೆ ಸಮಯದಲ್ಲಿ ತಾಯಿ ನರಸಿಂಹರಾಜು (61) ಮತ್ತು ತಾಯಿ ಸರಸ್ವತಿ (58) ಅವರನ್ನು ದಿಂಬಿನಿಂದ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾನೆ. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಬಂದು ಕಾವೇರಿ ನದಿಗೆ ಹಾರಿದ್ದಾನೆ.

ADVERTISEMENT

ಅಪಾರ್ಟ್‌ಮೆಂಟ್‌ ಖರೀದಿ ವಿಷಯ ಕುರಿತು ಸಂತೋಷ್‌ ಕುಟುಂಬದಲ್ಲಿ ಕಲಹ ಇತ್ತು. ಸಂತೋಷ್‌ ತಾಯಿ ಮತ್ತು ಪತ್ನಿಯ ನಡುವೆ ಸಾಮರಸ್ಯ ಇರಲಿಲ್ಲ. ಇದರಿಂದ ಬೇಸತ್ತ ಸಂತೋಷ್‌ ತನ್ನ ಪೋಷಕರನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂತೋಷ್‌ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.