ADVERTISEMENT

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ: ಅರೆಬರೆ ಜೋಡಣೆಯಿಂದ ತಪ್ಪಿದ ಅನಾಹುತ

ಆರೋಪಿ ಮನೆಯಲ್ಲಿ ರಾಶಿ ರಾಶಿ ಬೆಂಕಿ ಪೊಟ್ಟಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:31 IST
Last Updated 21 ನವೆಂಬರ್ 2022, 19:31 IST
ಸ್ಪೋಟಗೊಂಡ ಆಟೋದಲ್ಲಿ ಇದ್ದ ಕುಕ್ಕರ್
ಸ್ಪೋಟಗೊಂಡ ಆಟೋದಲ್ಲಿ ಇದ್ದ ಕುಕ್ಕರ್   

ಮಂಗಳೂರು: ‘ಕುಕ್ಕರ್‌ ಬಾಂಬ್‌ನ ನಟ್‌ ಬೋಲ್ಟ್‌ ಹಾಗೂ ಸರ್ಕ್ಯೂಟ್‌ ಗಳನ್ನು ಆರೋಪಿಯು ಸರಿಯಾಗಿ ಜೋಡಿಸಿರಲಿಲ್ಲ. ಹಾಗಾಗಿ ಸ್ಫೋಟದ ತೀವ್ರತೆ ಕಡಿಮೆ ಇತ್ತು. ಕುಕ್ಕರ್‌ ಬಾಂಬ್‌ ಅನ್ನು ಸರಿಯಾಗಿ ಜೋಡಿಸಿದ್ದರೆ ಆತನೇ ನುಚ್ಚುನೂರಾಗುತ್ತಿದ್ದ. ಇದನ್ನು ರಿಕ್ಷಾದಲ್ಲಿ ಸಾಗಿಸುತ್ತಿದ್ದಾಗ ಅದು ಅರ್ಧಂಬರ್ಧ ಸ್ಫೋಟಗೊಂಡಿದ್ದರಿಂದ ಅನೇಕರ ಪ್ರಾಣ ಹೋಗುವುದು ತಪ್ಪಿತು’ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು.

‘ಮೊಹಮ್ಮದ್‌ ಶಾರಿಕ್‌ ಕುಕ್ಕರ್‌ ಬಾಂಬ್‌ ಅನ್ನು ಮೈಸೂರಿನಲ್ಲಿಯೇ ತಯಾರಿಸಿದ್ದಾನೆ. ನಗರದಲ್ಲಿ ಬಾಂಬ್ ಸ್ಪೋಟ ನಡೆಸುವ ಉದ್ದೇಶದಿಂದ ಅದನ್ನು ಬಸ್‌ನಲ್ಲೇ ಮಂಗಳೂರಿಗೆ ಸಾಗಿಸಿದ್ದಾನೆ. ಮೈಸೂರಿನ ಬಾಡಿಗೆ ಮನೆಯಲ್ಲಿ ನಟ್‌, ಬೋಲ್ಟ್‌, ಸರ್ಕ್ಯೂಟ್‌ಗಳು, ಬ್ಯಾಟರಿಗಳು, ಆಧಾರ್‌ ಕಾರ್ಡ್‌ ಸಿಕ್ಕಿವೆ. 150 ಬೆಂಕಿಪೊಟ್ಟಣಗಳು, ರಂಜಕ, ಗಂಧಕ ಹಾಗೂ ಇತರ ರಾಸಾಯನಿಕಗಳು ಸೇರಿದಂತೆ ಅನೇಕ ಪುರಾವೆಗಳು ಸಿಕ್ಕಿವೆ. ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್, ಮಿಕ್ಸರ್, ಮೆಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಆಲ್ಯೂಮಿನಿಯಂ ಫಾಯಿಲ್, ಸಿಮ್ ಕಾರ್ಡ್‌ಗಳನ್ನೂ ಅಲ್ಲಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಬಾಂಬ್‌ ತಯಾರಿಸುತ್ತಿದ್ದ ವಿಷಯ ಮನೆಯ ಮಾಲೀಕ ಮೋಹನ್‌ ಕುಮಾರ್‌ಗೆ ಗೊತ್ತಿರಲಿಲ್ಲ. ಮನೆಯಲ್ಲಿ ಆಟಿಕೆಯ ಕೋವಿಯೂ ಪತ್ತೆಯಾಗಿದೆ. ಅದನ್ನೇಕೆ ಇಟ್ಟುಕೊಂಡಿದ್ದ ತಿಳಿದಿಲ್ಲ’ ಎಂದರು.

ADVERTISEMENT

‘ಆರೋಪಿ ಶಾರಿಕ್‌ ಬಿ.ಕಾಂ. ಪದವೀಧರ. ಕುಕ್ಕರ್‌ ಬಾಂಬ್‌ ತಯಾರಿ ಬಗ್ಗೆ ಸಂಪೂರ್ಣ ಪರಿಣತಿ ಆತನಿಗೆ ಇದ್ದಂತೆ ತೋರುತ್ತಿಲ್ಲ. ಅವನು ಸ್ವತಃ ಮೊಬೈಲ್‌ಗಳ ಕುರಿತು ತರಬೇತಿ ನೀಡುವವ. ಹಾಗಾಗಿ ಆತ ಮೊಬೈಲ್‌ ನೋಡಿಯೂ ಕಲಿತಿರಬಹುದು. ಅಂದುಕೊಂಡಿದ್ದನ್ನು ಸರಿಯಾಗಿ ಅನುಷ್ಠಾನಗೊಳಿಸಲು ಆತನಿಗೆ ಸಾಧ್ಯವಾಗಿಲ್ಲ’ ಎಂದು ಎಡಿಜಿಪಿ ತಿಳಿಸಿದರು.

‘ಪಿಎಫ್‌ಐ ನಿಷೇಧ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಯೋತ್ಪಾದನಾ ಕೃತ್ಯ ನಡೆಸಲಾಗುತ್ತಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ತನಿಖೆಯ ಬಳಿಕವಷ್ಟೇ ಈ ಬಗ್ಗೆ ಮಾಹಿತಿ ನೀಡಬಹುದು. ನಗರಕ್ಕೆ ಮುಖ್ಯಮಂತ್ರಿ ಭೇಟಿಗೂ ಈ ಘಟನೆಗೂ ಸಂಬಂಧ ಇದ್ದಂತೆ ತೋರುತ್ತಿಲ್ಲ.ಆರೋಪಿ ನ.10ರಂದು ನಗರಕ್ಕೆ ಬಂದು ಹೋಗಿದ್ದ. ಆತ ಬಾಂಬ್‌ ಇಡಲು ಸ್ಥಳ ನೋಡಿ ಹೋಗಿರಬಹುದು’ ಎಂದರು.

‘ಸದ್ಯಕ್ಕೆ ಕರ್ನಾಟಕದ ಪೊಲೀಸರೇ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿವಿಧ ತನಿಖಾ ಏಜೆನ್ಸಿಗಳ ನೆರವನ್ನೂ ಪಡೆಯುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಸ್ಫೋಟಕ್ಕೂ ಮುನ್ನ ಶಿವಮೊಗ್ಗದಲ್ಲಿ ತಾಲೀಮು

ಶಿವಮೊಗ್ಗ: ಮಂಗಳೂರಿನಲ್ಲಿ ಆಟೊದಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್‌ ಶಾರಿಕ್, ಈ ಮೊದಲು ಶಿವಮೊಗ್ಗ ಸಮೀಪದ ಪುರಲೆಯ ತುಂಗಾ ನದಿ ತೀರದ ನಿರ್ಜನ ಪ್ರದೇಶದಲ್ಲಿ ‍ಪ್ರಾಯೋಗಿಕವಾಗಿ ಬಾಂಬ್ ಸ್ಫೋಟ ನಡೆಸಿದ್ದನು.

ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್‌ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಸೆಪ್ಟೆಂಬರ್ 20ರಂದು ಇಲ್ಲಿನ ಸಿದ್ದೇಶ್ವರ ನಗರ ನಿವಾಸಿ ಸೈಯದ್‌ ಯಾಸೀನ್ ಅಲಿಯಾಸ್ ಬೈಲು (21) ಹಾಗೂ ಮಂಗಳೂರಿನ ಮಾಝ್ ಮುನೀರ್ ಅಹಮದ್ (22) ಎಂಬುವವರನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದರು.

ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ತೀರ್ಥಹಳ್ಳಿಯ ಶಾರಿಕ್ ನೇತೃತ್ವದಲ್ಲಿ ಬಾಂಬ್ ಸಿದ್ಧಪಡಿಸಿ ತುಂಗಾ ನದಿ ತೀರದಲ್ಲಿ ಸ್ಫೋಟಿಸಿದ್ದನ್ನು ಒಪ್ಪಿಕೊಂಡಿದ್ದರು. ನಂತರ ಸ್ಥಳದಲ್ಲಿ ಪೊಲೀಸರು ಸ್ಫೋಟದ ಕುರುಹುಗಳನ್ನು ಸಂಗ್ರಹಿಸಿದ್ದರು. ನಂತರ ಪ್ರಮುಖ ಆರೋಪಿ ಶಾರಿಕ್ ತಲೆಮರೆಸಿಕೊಂಡಿದ್ದನು.

ಆರೋಪಿಗಳು ಟೆಲಿಗ್ರಾಂ ಆ್ಯಪ್ ಮೂಲಕ ಐಎಸ್‌ನ ಅಧಿಕೃತ ಮಾಧ್ಯಮ ಅಲ್– ಹಯತ್‌ನ ಸದಸ್ಯರಾಗಿದ್ದರು. ಎಲೆಕ್ಟ್ರಿಕ್ ಎಂಜಿನಿಯರ್ ಆದ ಸೈಯದ್ ಯಾಸೀನ್ ಬಾಂಬ್ ತಯಾರಿಕೆಯ ಬಗ್ಗೆ ಐಎಸ್‌ ಮಾಧ್ಯಮದಿಂದಲೇ ಮಾಹಿತಿ ಪಡೆದಿದ್ದ. ಟೈಮರ್ ರಿಲೆ ಸರ್ಕ್ಯೂಟ್‌ ಆನ್‌ಲೈನ್‌ನಲ್ಲಿ ಖರೀದಿ ಸಿದ್ದ. 9 ವೋಲ್ಟ್‌ನ 2 ಬ್ಯಾಟರಿ, ಸ್ವಿಚ್, ವೈರ್‌ಗಳು, ಬೆಂಕಿಪೊಟ್ಟಣ ಮತ್ತಿತರ ವಸ್ತುಗಳನ್ನು ಶಿವಮೊಗ್ಗದಲ್ಲಿ ಖರೀದಿಸಿದ್ದರು ಎಂಬುದು ವಿಚಾರಣೆ ವೇಳೆ ಬಯಲಾಗಿತ್ತು.

ಬಾಂಬ್ ತಯಾರಿಗೆ ಅಗತ್ಯ ಹಣವನ್ನು ಶಾರಿಕ್ ಆನ್‌ಲೈನ್‌ ಮೂಲಕ ಯಾಸೀನ್‌ಗೆ ಕಳುಹಿಸಿದ್ದ. ಆರೋಪಿಗಳು ಪರಸ್ಪರ ಸಂಪರ್ಕಕ್ಕೆ ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ವೈರ್, ಎಲಿಮೆಂಟ್, ವಿಕ್ಕರ್ ಬಳಸುತ್ತಿದ್ದರು ಎಂದು ಗೊತ್ತಾಗಿತ್ತು.

ತೀರ್ಥಹಳ್ಳಿ ಪಟ್ಟಣದಲ್ಲಿ ಕೋಹಿನೂರ್ ಹೆಸರಿನ ಬಟ್ಟೆ ಅಂಗಡಿ ಶಾರಿಕ್ ಕುಟುಂಬ ಹೊಂದಿದೆ. ತಂದೆ ಅಬ್ದುಲ್ ಮಜೀದ್ ನಿಧನದ ನಂತರ ಶಾರಿಕ್ ಅಂಗಡಿ ನೋಡಿಕೊಳ್ಳುತ್ತಿದ್ದ. ಪಟ್ಟ ಣದ ಯು.ಆರ್.ಅನಂತ ಮೂರ್ತಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ಜೂನಿ ಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಉಡುಪಿಯ ಎಂಜಿಎಂ ಕಾಲೇಜು ಸೇರಿದ್ದ. ಅಲ್ಲಿ ಪದವಿ ಅರ್ಧಕ್ಕೆ ಮೊಟಕುಗೊಳಿಸಿದ್ದ. ನಂತರ ಮಂಗಳೂರಿನಲ್ಲಿ ಫುಡ್ ಪಾರ್ಸೆಲ್ ಡೆಲಿವರಿ ಕೆಲಸ ಮಾಡುತ್ತಿದ್ದ.

ಶಾರಿಕ್‌, ಮತೀನ್ ಓರಗೆಯವರು..

ನಿಷೇಧಿತ ‘ಅಲ್‌ ಹಿಂದ್‌ ಐಎಸ್‌’ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹುಡುಕುತ್ತಿರುವ ಅಬ್ದುಲ್ ಮತೀನ್ ಅಹಮದ್ ತಾಹಾ (26) ಹಾಗೂ ಮೊಹಮ್ಮದ್‌ ಶಾರಿಕ್ ಓರಗೆಯವರು.

ಅಬ್ದುಲ್ ಮತೀನ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೀನು ಮಾರ್ಕೆಟ್ ರಸ್ತೆ ನಿವಾಸಿ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದನ್ನು ಮತೀನ್ ಅರ್ಧಕ್ಕೆ ಬಿಟ್ಟಿದ್ದಾನೆ. ಮತೀನ್ ಪತ್ತೆಗೆ ಸುಳಿವು ನೀಡಿದವರಿಗೆ ₹ 3 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ 2020ರಲ್ಲೇ ಘೋಷಿಸಿದೆ. ಮತೀನ್ ತಂದೆ ಮನ್ಸೂರ್ ಅಹಮದ್ ನಿವೃತ್ತ ಸೈನಿಕರು.

ನಾಲ್ವರ ಆಧಾರ್‌ ದುರ್ಬಳಕೆ

ಶಾರಿಕ್‌ ಕೇವಲ ಪ್ರೇಮರಾಜ ಹುಟಗಿ ಅವರ ಆಧಾರ್‌ ಕಾರ್ಡ್‌ ಮಾತ್ರವಲ್ಲ, ಇನ್ನೂ ಮೂವರ ಗುರುತುಗಳನ್ನೂ ಕದ್ದು ಬಳಕೆ ಮಾಡಿದ್ದ.

ಸುರೇಂದ್ರ ಎಂಬ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಿಮ್ ಪಡೆದಿದ್ದ. ಸಂಡೂರಿನ ಅರುಣ್‌ ಕುಮಾರ್‌ ಗಾವಳಿ ಎಂಬುವರ ಆಧಾರ್‌ ಕಾರ್ಡ್‌ ಅನ್ನು ಕೊಯಮತ್ತೂರಿನಲ್ಲಿ ನೆಲೆಸಲು ನಕಲಿ ಗುರುತನ್ನಾಗಿ ಆರೋಪಿ ದುರ್ಬಳಕೆ ಮಾಡಿಕೊಂಡಿದ್ದ. ಗದಗದ ವ್ಯಕ್ತಿಯೊಬ್ಬರ ಹೆಸರಿನ ಆಧಾರ್‌ ಕಾರ್ಡ್‌ ಕದ್ದು ನಕಲಿ ಗುರುತು ಸೃಷ್ಟಿಸಲು ಬಳಸಿಕೊಂಡಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದರು.

‘ಆಧಾರ್‌ ಕಳವಾದರೆ ದೂರು ನೀಡಿ’

‘ಆಧಾರ್‌ ಕಾರ್ಡ್‌ ಕಳವಾಗಿದ್ದರೆ ಅದನ್ನು ಲಘುವಾಗಿ ಪರಿಗಣಿಸಬಾರದು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ತಕ್ಷಣ ದೂರು ನೀಡಬೇಕು. ಅಥವಾ ಇ–ಲಾಸ್ಟ್‌ ಪೋರ್ಟಲ್‌ನಲ್ಲೂ ದೂರು ನೀಡಬಹುದು. ಕುಕ್ಕರ್‌ ಬಾಂಬ್‌ ಸ್ಫೋಟಗೊಂಡ ಸ್ಥಳದಲ್ಲಿ ಪ್ರೇಮರಾಜ ಹುಟಗಿ ಅವರ ಆಧಾರ್‌ ಕಾರ್ಡ್‌ ಪತ್ತೆಯಾಗಿತ್ತು. ಒಂದು ವೇಳೆ ನೈಜ ಆರೋಪಿ ಪತ್ತೆಯಾಗದೇ ಇರುತ್ತಿದ್ದರೆ, ಪ್ರೇಮರಾಜ ಅವರನ್ನು ಬಂಧಿಸಬೇಕಾದ ಪ್ರಮೇಯ ಸೃಷ್ಟಿಯಾಗುತ್ತಿತ್ತು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಆಸ್ಪದ ನೀಡಬಾರದು’ ಎಂದು ಎಡಿಜಿಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.