ADVERTISEMENT

ಮಂಗಳೂರು ಗೋಲಿಬಾರ್‌ ಪ್ರಕರಣ: ಟಿಎಂಸಿಯಿಂದ ಪರಿಹಾರ ವಿತರಣೆ

ತಲಾ ₹ 5 ಲಕ್ಷದ ಚೆಕ್‌ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 7:21 IST
Last Updated 28 ಡಿಸೆಂಬರ್ 2019, 7:21 IST
ಮಾಜಿ ರೈಲ್ವೆ ಸಚಿವ ದಿನೇಶ್‌ ತ್ರಿವೇದಿ ಮತ್ತು ರಾಜ್ಯಸಭಾ ಸದಸ್ಯ ಎಂ.ಡಿ.ನದೀಮ್ ಉಲ್‌ ಹಕ್‌ ನೇತೃತ್ವದ ನಿಯೋಗ
ಮಾಜಿ ರೈಲ್ವೆ ಸಚಿವ ದಿನೇಶ್‌ ತ್ರಿವೇದಿ ಮತ್ತು ರಾಜ್ಯಸಭಾ ಸದಸ್ಯ ಎಂ.ಡಿ.ನದೀಮ್ ಉಲ್‌ ಹಕ್‌ ನೇತೃತ್ವದ ನಿಯೋಗ   

ಮಂಗಳೂರು: ನಗರದಲ್ಲಿ ಡಿಸೆಂಬರ್‌ 19ರಂದು ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಇಬ್ಬರ ಕುಟುಂಬಗಳಿಗೆ ತೃಣಮೂಲ ಕಾಂಗ್ರೆಸ್‌ ಶನಿವಾರ ತಲಾ ₹ 5 ಲಕ್ಷ ಮೊತ್ತದ ಪರಿಹಾರ ವಿತರಿಸಿತು.

ಮಾಜಿ ರೈಲ್ವೆ ಸಚಿವ ದಿನೇಶ್‌ ತ್ರಿವೇದಿ ಮತ್ತು ರಾಜ್ಯಸಭಾ ಸದಸ್ಯ ಎಂ.ಡಿ.ನದೀಮ್ ಉಲ್‌ ಹಕ್‌ ನೇತೃತ್ವದ ನಿಯೋಗ ಶನಿವಾರ ಬೆಳಿಗ್ಗೆ ಮಂಗಳೂರಿಗೆ ಬಂದು ಗೋಲಿಬಾರ್‌ನಲ್ಲಿ ಮೃತಪಟ್ಟಿರುವ ಕಂದಕ್‌ ನಿವಾಸಿ ಅಬ್ದುಲ್‌ ಜಲೀಲ್‌ ಹಾಗೂ ಕುದ್ರೋಳಿ ನಿವಾಸಿ ನೌಶೀನ್‌ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿತು. ಬಳಿಕ ತಲಾ ₹ 5 ಲಕ್ಷ ಮೊತ್ತದ ಪರಿಹಾರದ ಚೆಕ್‌ ವಿತರಿಸಿತು. ಮಹಾನಗರ ಪಾಲಿಕೆ ಸದಸ್ಯರಾದ ಲತೀಫ್‌ ಕಂದಕ್‌, ಶಂಸುದ್ದೀನ್‌ ಕುದ್ರೋಳಿ ಉಪಸ್ಥಿತರಿದ್ದರು.

ಮೃತರ ಕುಟುಂಬಗಳಿಗೆ ಘೋಷಿಸಿದ್ದ ತಲಾ ₹ 10 ಲಕ್ಷ ಮೊತ್ತದ ಪರಿಹಾರ ವಿತರಣೆಗೆ ತಡೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಘೋಷಿಸಿದ್ದರು. ಅದನ್ನು ಖಂಡಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ನಿಂದ ತಲಾ ₹ 5 ಲಕ್ಷ ಮೊತ್ತದ ಪರಿಹಾರ ಘೋಷಿಸಿದ್ದರು. ಪಕ್ಷದ ಕಾರ್ಮಿಕ ಸಂಘಟನೆಯ ಮೂಲಕ ವಂತಿಗೆ ಸಂಗ್ರಹಿಸಿ ಈ ಪರಿಹಾರ ನೀಡಲಾಗಿದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ADVERTISEMENT

ಪರಿಹಾರ ವಿತರಿಸಿದ ಬಳಿಕ ಮಾತನಾಡಿದ ತೃಣಮೂಲ ಕಾಂಗ್ರೆಸ್‌ ನಾಯಕರು, ‘ಗೋಲಿಬಾರ್‌ ನಡೆಸಿ ಇಬ್ಬರನ್ನು ಕೊಲೆ ಮಾಡಿರುವುದು ಖಂಡನೀಯ. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಎಲ್ಲಿಯೂ ಈ ರೀತಿ ಗುಂಡು ಹಾರಿಸಿಲ್ಲ. ಪೊಲೀಸರ ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.