ADVERTISEMENT

ಮಂಗಳೂರು ‌ಕುಕ್ಕರ್ ಬಾಂಬ್ ಸ್ಫೋಟ | ಆರೋಪಿ ಖಾತೆಯಲ್ಲಿದ್ದ ಹಣ ಮುಟ್ಟುಗೋಲು: ಇಡಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 15:49 IST
Last Updated 6 ಆಗಸ್ಟ್ 2025, 15:49 IST
<div class="paragraphs"><p>ಇಡಿ </p></div>

ಇಡಿ

   

ಮಂಗಳೂರು: ‌ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸೈಯದ್ ಯಾಸಿನ್‌ನ ಖಾತೆಯಲ್ಲಿದ್ದ ₹ 29,176 ಮೊತ್ತವನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ನಗರದ ನಾಗುರಿ ಬಳಿ 2022ರ ನವೆಂಬರ್‌ 19ರಂದು ಸಂಜೆ 4.40ರ ವೇಳೆ ಆಟೊದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕುಕ್ಕರ್‌ ಬಾಂಬ್‌ ಸ್ಫೋಟವಾಗಿತ್ತು. ಆಟೊ ಚಾಲಕ ಪುರುಷೋತ್ತಮ ಪೂಜಾರಿ ತೀವ್ರವಾಗಿ ಗಾಯಗೊಂಡಿದ್ದರು. ಅವರು ನೀಡಿದ ದೂರಿನ ಆಧಾರದಲ್ಲಿ ಕಂಕನಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು.

ADVERTISEMENT

ಆರ್ಥಿಕ ವಂಚನೆ ಆರೋಪದ ಕಾರಣಕ್ಕಾಗಿ ಈ ತನಿಖೆಯಲ್ಲಿ ಇ.ಡಿ ಸಹ ಭಾಗಿಯಾಗಿದೆ. ಇಡಿ ಬೆಂಗಳೂರು ವಲಯ ಕಚೇರಿ ಇದೇ ತಿಂಗಳ 5ರಂದು ಹಣವನ್ನು ಮುಟ್ಟುಗೋಲು ಹಾಕಿದೆ ಎಂದು  ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ, ಸ್ಫೋಟವು ಐಸಿಸ್‌ ಉಗ್ರರ ಸಂಚಿನ ಭಾಗವಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಐಸಿಸ್‌ನ ಆನ್‌ಲೈನ್ ವ್ಯವಹಾರ ನಿರ್ವಹಿಸುವ ಕರ್ನಲ್‌ ಎಂಬ ಹೆಸರಿನ ವ್ಯಕ್ತಿ ವಿಕರ್ ಆ್ಯಪ್‌ ಮತ್ತು ಟೆಲಿಗ್ರಾಂ ಮೂಲಕ ಮೊಹಮ್ಮದ್ ಶಾರಿಗ್‌ ಅಲಿಯಾಸ್ ಪ್ರೇಂರಾಜ್‌ ಮತ್ತಿತರರಿಗೆ ಸ್ಫೋಟಕಗಳ ತಯಾರಿ ಮಾಡುವ ತರಬೇತಿ ನೀಡುತ್ತಿದ್ದ ಮತ್ತು ಕ್ರಿಪ್ಟೊ ಕರೆನ್ಸಿ ಹಾಗೂ ನಕಲಿ ಖಾತೆಗಳ ಮೂಲಕ ಹಣ ಒದಗಿಸುತ್ತಿದ್ದ. ಹಣವನ್ನು ಸೈಯದ್ ಯಾಸಿನ್ ಮತ್ತು ಮೊಹಮ್ಮದ್ ಶಾರಿಗ್ ಪಡೆಯುತ್ತಿದ್ದರು. ಕ್ರಿಪ್ಟೊ ಕರೆನ್ಸಿ ಮೂಲಕ ₹ 2,86,008 ಹಾಗೂ ವಿವಿಧ ಏಜೆಂಟರ ಮೂಲಕ ₹ 41,680 ಪಡೆದುಕೊಳ್ಳಲಾಗಿತ್ತು ಎಂದೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. 

ಆರೋಪಿಗಳು ಹಣವನ್ನು ಸ್ಫೋಟಕಕ್ಕೆ ಬೇಕಾದ ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ಹಾಗೂ ಮೈಸೂರು ನಗರ ಮತ್ತಿತರ ಕಡೆಗಳಲ್ಲಿ ಅಡಗುತಾಣಗಳಿಗೆ ಬಾಡಿಗೆ ಸಂದಾಯ ಮಾಡಲು ಬಳಸಿದ್ದರು. ಈ ಬಾಂಬ್‌ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಇರಿಸುವ ಹುನ್ನಾರ ಇತ್ತು. ಸ್ಫೋಟಕ್ಕೆ 90 ನಿಮಿಷಗಳನ್ನು ಸೆಟ್ ಮಾಡುವ ಬದಲು 09 ಎಂದು ಸೆಟ್ ಮಾಡಿದ್ದರಿಂದ ದಾರಿ ಮಧ್ಯೆ ಆಟೊದಲ್ಲಿ ಸ್ಫೋಟಗೊಂಡಿತ್ತು. ಮಹಮ್ಮದ್‌ ಶಾರಿಗ್‌ನ ಬ್ಯಾಗ್‌ನಿಂದ ಆಸ್ಪತ್ರೆಯಲ್ಲಿ ₹ 39,228 ಮೊತ್ತವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದನ್ನು ನಂತರ ಎನ್‌ಐಎಗೆ ವರ್ಗಾಯಿಸಲಾಗಿತ್ತು. ಆರೋಪಿಗಳೆಲ್ಲರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.