ADVERTISEMENT

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಮಳೆ: ಸುಬ್ರಹ್ಮಣ್ಯ ಸ್ನಾನಘಟ್ಟ ಜಲಾವೃತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 10:55 IST
Last Updated 4 ಜುಲೈ 2022, 10:55 IST
ಸುಬ್ರಹ್ಮಣ್ಯ ಪರಿಸರದಲ್ಲಿ ಅಡಿಕೆ ತೋಟಗಳು ಸೋಮವಾರ ಜಲಾವ್ರತವಾಗಿವೆ
ಸುಬ್ರಹ್ಮಣ್ಯ ಪರಿಸರದಲ್ಲಿ ಅಡಿಕೆ ತೋಟಗಳು ಸೋಮವಾರ ಜಲಾವ್ರತವಾಗಿವೆ   

ಮಂಗಳೂರು: ಕರಾವಳಿಯಾದ್ಯಂತ ಸೋಮವಾರ ಧಾರಾಕಾರ ಮಳೆಯಾಗಿದೆ. ಭಾನುವಾರ ರಾತ್ರಿಯಿಂದಲೂ ಬಿಟ್ಟು ಬಿಟ್ಟಿ ಮಳೆಯಾಗುತ್ತಲೇ ಇತ್ತು. ಪಶ್ಚಿಮ ಘಟ್ಟ ತಪ್ಪಲು ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಇದರಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ, ಶಾಂಭವಿ ನದಿಗಳು ಹಾಗೂ ಅವುಗಳ ಉಪನದಿಗಳು ತುಂಬಿ ಹರಿಯುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ ಸರಾಸರಿ 71.7 ಮಿ.ಮೀ ಮಳೆಯಾಗಿದೆ. ಬೆಳ್ತಂಗತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು (98.4 ಮಿ.ಮೀ) ಮಳೆಯಾಗಿದೆ. ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಸುಬ್ರಹ್ಮಣ್ಯ: ಸ್ನಾನಘಟ್ಟ ಜಲಾವ್ರತ

ADVERTISEMENT

ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ನದಿ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟ ಮಾತ್ರವಲ್ಲದೆ, ಸ್ನಾನಘಟ್ಟದ ಬಳಿಯಿರುವ ದೇವರ‌ಕಟ್ಟೆಯೂ ಭಾಗಶಃ ಮುಳುಗಡೆಯಾಗಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬರುವ ಭಕ್ತರು ತೀರ್ಥಸ್ನಾನ ನೆರವೇರಿಸಲು ತೊಂದರೆಯಾಗಿದೆ.

ಭಕ್ತರು ಪ್ರವಾಹದ ಅಪಾಯ ಲೆಕ್ಕಿಸದೇ ತೀರ್ಥಸ್ನಾನವನ್ನು ನೆರವೇರಿಸುತ್ತಿದ್ದರು. ಇದನ್ನು ಕಂಡು ದೇವಸ್ಥಾನದ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.‌ ಸ್ನಾನಘಟ್ಟದಲ್ಲಿ ರಾತ್ರಿ- ಹಗಲು ಎರಡು ಜನರಿರುವ ರಕ್ಷಕ ದಳವನ್ನು ನಿಯೋಜಿಸಲಾಗಿದೆ. ತೀರ್ಥಸ್ನಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಕುಮಾರಧಾರಾ ನದಿ ತೀರದಲ್ಲಿ ಹಗ್ಗವನ್ನು ಅಳವಡಿಸಲಾಗಿದೆ.

ದೇವಸ್ಥಾನದ ಪಕ್ಕದಲ್ಲೇ ಹರಿಯುವ ದರ್ಪಣ ತೀರ್ಥ ಹೊಳೆಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಹೊಳೆ ನೀರು ಆಸುಪಾಸಿನ ಕೃಷಿ ತೋಟಗಳಿಗೆ ನುಗ್ಗಲಾರಂಭಿಸಿದೆ. ಸುಬ್ರಹ್ಮಣ್ಯ ಸಮೀಪದಲ್ಲಿ ಕಿಂಡಿ ಅಣೆಕಟ್ಟೆಯಲ್ಲಿ ಮರ ಹಾಗೂ ಕಸ ಕಡ್ಡಿ ಸಿಲುಕಿದ್ದರಿಂದ ಆಸುಪಾಸಿನ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಅಕ್ಕಪಕ್ಕದ ತೋಟಗಳು ನೀರಿನಲ್ಲಿ ಮುಳುಗಡೆಯಾದವು. ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆ ಜಲಾವೃತವಾಗಿತ್ತು.

ಮಂಗಳೂರಿನಲ್ಲೂ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ. ವಾರದಿಂದ ಈಚೆಗೆ ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಕಡಲ್ಕೊರೆತದ ಅಬ್ಬರ ಕಡಿಮೆ ಆಗಿಲ್ಲ. ಉಳ್ಳಾಲ ಪರಿಸರದಲ್ಲಿ ಸುಮಾರು 30 ಮನೆಗಳು ಈಗಲೂ ಅಪಾಯದ ಸ್ಥಿತಿಯಲ್ಲಿವೆ. ಭಾರಿ ಗಾತ್ರದ ಅಲೆಗಳ ಅಬ‌್ಬರಕ್ಕೆ ಉಚ್ಚಿಲ ಬಟ್ಟಪ್ಪಾಡಿಯನ್ನು ಸಂಪರ್ಕಿಸುವ ರಸ್ತೆಯೊಂದು ಸಂಪೂರ್ಣ ಕೊಚ್ಚಿಹೋಗಿದೆ.

ಬಂಟ್ವಾಳ ತಾಲ್ಲೂಕಿನಲ್ಲಿ 66.6 ಮಿ.ಮೀ, ಮಂಗಳೂರಿನಲ್ಲಿ 45.2 ಮಿ.ಮೀ, ಪುತ್ತೂರಿನಲ್ಲಿ 67.4 ಮಿ.ಮೀ, ಸುಳ್ಯದಲ್ಲಿ 49.6, ಮೂಡುಬಿದಿರೆಯಲ್ಲಿ 85.2 ಹಾಗೂ ಕಡಬದಲ್ಲಿ 64.9 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.