ADVERTISEMENT

ಹೈಕೋರ್ಟ್‌: ದಿನದಲ್ಲಿ 503 ಅರ್ಜಿ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 14:39 IST
Last Updated 17 ಸೆಪ್ಟೆಂಬರ್ 2024, 14:39 IST
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ    

ಬೆಂಗಳೂರು: ಕ್ಷಿಪ್ರಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಹೆಸರಾಗಿರುವ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ ದಿನದ ಕಲಾಪದಲ್ಲಿ 503 ಅರ್ಜಿಗಳನ್ನು ವಿಚಾರಣೆ ನಡೆಸಿದರು.

ಬೆಂಗಳೂರು ಪ್ರಧಾನ ಪೀಠದಲ್ಲಿನ 17ನೇ ಕೋರ್ಟ್‌ ಹಾಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರದ (ಸೆ.17) ಕಲಾಪದಲ್ಲಿ ಪಟ್ಟಿ ಮಾಡಲಾಗಿದ್ದ ಒಟ್ಟು 503 ಕ್ರಿಮಿನಲ್‌ ಹಾಗೂ ರಿಟ್‌ ಅರ್ಜಿಗಳನ್ನು ದಿನದ ಕಲಾಪದ ಅವಧಿ ಪೂರ್ಣಗೊಳ್ಳುವುದಕ್ಕೂ 45 ನಿಮಿಷಗಳ ಮುಂಚಿತವಾಗಿ ಮುಕ್ತಾಯಗೊಳಿಸಿದರು. ಇವುಗಳಲ್ಲಿ 187 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 125 ಪ್ರಕರಣಗಳಲ್ಲಿ ಮಧ್ಯಂತರ ಆದೇಶ‌ ನೀಡಲಾಗಿದೆ.

ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ (ಸದ್ಯ ಧಾರವಾಡ ಪೀಠಾಸೀನ ನ್ಯಾಯಮೂರ್ತಿ) ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಇವರಿಬ್ಬರೂ ನಿಯಮಿತವಾಗಿ ತಮ್ಮಗಳ ಸರದಿಗೆ ಒಪ್ಪಿಸಲಾಗುವ ಯಾವುದೇ ವರ್ಗಗಳ ಅರ್ಜಿಗಳ ಕ್ಷಿಪ್ರ ವಿಲೇವಾರಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ನ್ಯಾ.ನಾಗಪ್ರಸನ್ನ ಅವರು ಒಂದು ದಿನದ ಕಲಾಪದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.