ADVERTISEMENT

‘ಪ್ರಜಾಸತ್ತಾತ್ಮಕ ಹೋರಾಟಕ್ಕೆ ನಾಂದಿ’

ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳಿಂದ ‘ಭಾರತ ಬಂದ್‌’ಗೆ ಕರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 20:11 IST
Last Updated 26 ಸೆಪ್ಟೆಂಬರ್ 2021, 20:11 IST

ಬೆಂಗಳೂರು: ಕೃಷಿ ಕಾಯ್ದೆಗಳನ್ನುವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿರುವ ಭಾರತ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

‘ಬಂದ್‌ಗೆ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಈ ಬಂದ್ ದೇಶದೆಲ್ಲೆಡೆ ಪ್ರಜಾಸತ್ತಾತ್ಮಕ ಹೋರಾಟಗಳ ಹೊಸ ಪರ್ವಕ್ಕೆ ನಾಂದಿ ಹಾಡಲಿದೆ’ ಎಂದು ವೇದಿಕೆ ಅಧ್ಯಕ್ಷ ಬಿ.ಆರ್‌. ಮಂಜುನಾಥ್‌ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನುಅನುಸರಿಸುತ್ತಿದೆ. ಜನವಿರೋಧಿ
ಶಿಕ್ಷಣ ನೀತಿ ಜಾರಿಗೊಳಿಸಲು ಮುಂದಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ವಾಹನಗಳ ಸಂಚಾರಕ್ಕೆ ಒತ್ತಾಯ ಇಲ್ಲ: ‘ರೈತರ ಹೋರಾಟಕ್ಕೆ ಬೆಂಬಲ ಇದೆ. ಆದರೆ, ವಾಹನಗಳ ಸಂಚಾರ ಸ್ಥಗಿತ
ಗೊಳಿಸುವಂತೆ ಯಾರನ್ನು ಒತ್ತಾಯಿಸುವುದಿಲ್ಲ’ ಎಂದು ಕರ್ನಾಟಕ ರಾಜ್ಯ ಖಾಸಗಿ ವಾಹನಗಳ ಚಾಲಕರ ಸಂಘದ ಅಧ್ಯಕ್ಷ ಪುಟ್ಟಲಿಂಗಯ್ಯತಿಳಿಸಿದ್ದಾರೆ.

‘ಎರಡು ಲಾಕ್‌ಡೌನ್‌ಗಳಿಂದ ತತ್ತರಿಸಿದ್ದೇವೆ. ಸಾಲದ ಹೊರೆ ಹೆಚ್ಚಾಗಿದೆ. ಪೆಟ್ರೋಲ್‌,ಡೀಸೆಲ್‌ ದರವೂ ಹೆಚ್ಚಾ
ಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ದಿನ ದುಡಿಮೆ ನಿಲ್ಲಿಸಿದರೆ ಕಷ್ಟ ವಾಗುತ್ತದೆ. ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತೇವೆ’ ಎಂದು ಒಲಾ–ಉಬರ್‌ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ಹೇಳಿದ್ದಾರೆ.

‘ಹೋಟೆಲ್‌ ಬಂದ್‌ ಮಾಡಿದರೆ ರೈತರಿಗೆ ನಷ್ಟ’: ‘ಬಂದ್‌ಗೆ ಬೆಂಬಲ ಇಲ್ಲ. ಕೃಷಿ ಉತ್ಪನ್ನಗಳ ಮೇಲೆಯೇ ಹೋಟೆಲ್‌ ಉದ್ಯಮ ಅವಲಂಬಿತವಾಗಿರುವುದರಿಂದ ಹೋಟೆಲ್‌ಗಳನ್ನು ಬಂದ್‌ ಮಾಡಿದರೆ ರೈತರಿಗೆ ನಷ್ಟವಾಗುತ್ತದೆ’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ತಿಳಿಸಿದ್ದಾರೆ.

‘ಸೋಮವಾರ ಎಲ್ಲ ಹೋಟೆಲ್‌ಗಳು ತೆರೆದಿರುತ್ತವೆ. ಆದರೆ, ರೈತರಿಗೆ ನಾವು ಸದಾ ಬೆಂಬಲ ನೀಡುತ್ತಾ ಬಂದಿದ್ದೇವೆ. ರೈತ ಸಮುದಾಯದ ಜತೆ ಅನ್ಯೋನ್ಯ ಸಂಬಂಧ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

***

ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಲಾಗಿದೆ. ಸ್ವಯಂ ನಿರ್ಧಾರ ಕೈಗೊಳ್ಳುವಂತೆ ಆಟೋ ಚಾಲಕರಿಗೆ ತಿಳಿಸಿದ್ದೇವೆ.

- ರುದ್ರಮೂರ್ತಿ, ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್‌ ಅಧ್ಯಕ್ಷ

***

ನಾವು ರೈತರ ಮಕ್ಕಳಾಗಿ ಬಂದ್‌ಗೆ ನೈತಿಕ ಬೆಂಬಲ ಕೊಡುತ್ತೇವೆ. ಆದರೆ, ಬಸ್‌ಗಳ ಸಂಚಾರಕ್ಕೆ ಯಾವುದೇ ರೀತಿ ಅಡ್ಡಿ ಮಾಡುವುದಿಲ್ಲ. ನಾಲ್ಕು ನಿಗಮಗಳಲ್ಲಿ ಬಸ್‌ಗಳ ಸಂಚಾರಕ್ಕೆ ವ್ಯತ್ಯಯವಾಗುವುದಿಲ್ಲ.

- ಆರ್‌. ಚಂದ್ರಶೇಖರ್‌, ಸಾರಿಗೆ ನೌಕರರ ಕೂಟದ ಅಧ್ಯಕ್ಷ

***

ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ. ಬಸ್‌ಗಳ ಸೇವೆ ಎಂದಿನಂತೆ ಇರಲಿದೆ.

- ವಿ. ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.