ADVERTISEMENT

ಕುವೆಂಪುಗೆ ಅವಮಾನ: ವಿರೋಧದ ಅಲೆ

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಜಾಕ್ಕೆ ಹೆಚ್ಚಿದ ಒತ್ತಡ: ರೋಹಿತ್ ಚಕ್ರತೀರ್ಥ ಬೆಂಬಲಕ್ಕೆ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 30 ಮೇ 2022, 17:22 IST
Last Updated 30 ಮೇ 2022, 17:22 IST

ಬೆಂಗಳೂರು: ನಾಡಗೀತೆ ಹಾಗೂಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಜಾ ಮಾಡಬೇಕು ಎಂಬ ಆಗ್ರಹ ಬಲಗೊಳ್ಳುತ್ತಿದೆ. ಈ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರತಿರೋಧದ ಅಲೆಯೂ ಬಿರುಸುಗೊಳ್ಳುತ್ತಿದೆ.

‘ಸಮಿತಿ ವಜಾಗೊಳಿಸುವ ಜತೆಗೆ ರೋಹಿತ್‌ ಬೆಂಬಲಕ್ಕೆ ನಿಂತಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವಬಿ.ಸಿ. ನಾಗೇಶ್ ರಾಜೀನಾಮೆ ನೀಡ ಬೇಕು‘ ಎಂದು ಒತ್ತಾಯಿಸಿ ರಾಜ್ಯದ ವಿವಿಧೆಡೆ ಪ್ರಗತಿಪ‍ರ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

‘ನಾಡಗೀತೆಯನ್ನು ತಿರುಚಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಪತ್ರ ಬರೆದಿದ್ದ ಸಾಹಿತಿ ಹಂ.ಪ. ನಾಗರಾಜಯ್ಯ ಅವರು ಸರ್ಕಾರ ಸ್ಥಾಪಿಸಿ
ರುವ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ, ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ’ದ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ‘ನಾಡಗೀತೆ ತಿರುಚಿರುವ ವ್ಯಕ್ತಿ ವಿರುದ್ಧ ತಡಮಾಡದೇ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಈ ಬೆಳವಣಿಗೆಗಳ ಮಧ್ಯೆಯೇ, ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾದ ಸಚಿವ ನಾಗೇಶ್, ಪಠ್ಯಪುಸ್ತಕದ ಬಗ್ಗೆ ವಿವರ ನೀಡಿ, ಮನವೊಲಿಸುವ ಯತ್ನ ಮಾಡಿದ್ದಾರೆ.

‘ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮಾಡಿರುವ ವಿಷಯ ಅತ್ಯಂತ ಸೂಕ್ಷ್ಮವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಅವಹೇಳನ ಮಾಡಿದವರ ವಿರುದ್ಧ ಕ್ರಮ ಜರುಗಿಸಿದ್ದರೆ ಇಷ್ಟು ದೊಡ್ಡಮಟ್ಟಕ್ಕೆ ಹೋಗುತ್ತಿರಲಿಲ್ಲ. ಜಾಲತಾಣಗಳಲ್ಲಿ ಅವಹೇಳನ ಮಾಡಿದವರ ವಿರುದ್ಧ ಕ್ರಮ ಜರುಗಿಸುವುದು ಮೊದಲ ಆದ್ಯತೆಯಾಗಬೇಕು’ ಎಂದು ಸ್ವಾಮೀಜಿ ಅವರು ನಿಷ್ಠುರವಾಗಿಯೇ ಸಚಿವರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

‘ನಾಡಗೀತೆಯನ್ನು ವ್ಯಂಗ್ಯವಾಡಿ ತಿರುಚಿದ್ದ ಪದ್ಯಭಾಗವೊಂದನ್ನು ಚಕ್ರತೀರ್ಥ ಅವರು 2017ರಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಾಕಿಕೊಂಡಿದ್ದರು. ನಾಡಗೀತೆಯನ್ನು ಒಳ ಉಡುಪಿಗೆ ಹೋಲಿಸಿ ಕಟಕಿಯಾಡಿದ್ದರು’ ಎಂದು ಆಪಾದಿಸಲಾಗಿದೆ. ‘ಅದು ತಾವು ಬರೆದಿದ್ದಲ್ಲ,
ಯಾರೋ ಬರೆದಿದ್ದನ್ನು ಹಂಚಿಕೊಂಡಿದ್ದೆ’ ಎಂದು ಚಕ್ರತೀರ್ಥ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

‌ಮೇ 28ರಂದು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದ ನಿರ್ಮಲಾನಂದನಾಥ ಸ್ವಾಮೀಜಿ, ‘ಈ ವ್ಯಕ್ತಿಯ ವಿರುದ್ಧ ಸರ್ಕಾರವು ಸೈಬರ್ ಕ್ರೈಂ ಕಾಯ್ದೆಯಡಿ ಕ್ರಮ ಜರುಗಿಸುತ್ತದೆ ಎಂಬ ಭರವಸೆ ಇದೆ’ ಎಂದು ಹೇಳಿದ್ದರು.

ಮರುದಿನ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸ್ವಾಮೀಜಿಗಳ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಚಿವರ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದ್ದರು.

ರೋಹಿತ್ ಬೆಂಬಲಕ್ಕೆ ಬಿಜೆಪಿ: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ಬಿಜೆಪಿ ನಾಯಕರು, ರೋಹಿತ್‌ ಬೆಂಬಲಕ್ಕೆ ನಿಲ್ಲುವುದಾಗಿ ‍ಪ್ರಕಟಿಸಿದ್ದಾರೆ.

ಸಂಸದ ಡಿ.ವಿ. ಸದಾನಂದಗೌಡ, ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಬಿಜೆಪಿ ನಾಯಕರು, ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರತಿಷ್ಠಾನಕ್ಕೆ ಹಂಪನಾ ರಾಜೀನಾಮೆ:

‘ಕುವೆಂಪು ಅವರನ್ನೂ ಹಾಗೂ ನಮ್ಮ ನಾಡಗೀತೆಯನ್ನು ಅಪಮಾನಿಸಿರುವ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವ ಮೊದಲು ಜವಾಬ್ದಾರಿಯ ಸ್ಥಾನವನ್ನು ಅವರಿಗೆ ನೀಡಿದೆ. ಇದು ಅಪಾಯಕಾರಿ ಬೆಳವಣಿಗೆ. ಇದನ್ನು ನೋಡಿಕೊಂಡು ತೆಪ್ಪಗಿರುವುದು ಕಷ್ಟವಾಗಿದೆ’ ಎಂದು ಪ್ರತಿಪಾದಿಸಿರುವ ಸಾಹಿತಿ ಹಂ.ಪ. ನಾಗರಾಜಯ್ಯ ಅವರು, ಸರ್ಕಾರ ಸ್ಥಾಪಿಸಿರುವ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ‘ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೂ ಕರ್ನಾಟಕಕ್ಕೂ ಗೌರವ ತಂದಿರುವ ಕುವೆಂಪು ಅವರು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ ಮೊದಲಿಗರು. ಸರ್ಕಾರ ಅವರ ಹೆಸರಿನಲ್ಲಿ ಪ‍್ರತಿಷ್ಠಾನ ಸ್ಥಾಪಿಸಿತಲ್ಲದೇ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಕುವೆಂಪು ಮಾತ್ರವಲ್ಲದೇ, ಅವರು ಹುಟ್ಟಿದ ಜನಾಂಗವನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ನಾಡಗೀತೆಯನ್ನೂ ಲೇವಡಿ ಮಾಡಿರುವವ್ಯಕ್ತಿಯೊಬ್ಬರಿಗೆ ಸರ್ಕಾರ ಜವಾಬ್ದಾರಿಯ ಸ್ಥಾನ ನೀಡಿದೆ. ಇದರಿಂದ ‘ಪುಣ್ಯಶ್ಲೋಕರ ಮೇಲೆ ಕೆಟ್ಟ ಮಾತುಗಳ ಮಳೆ ಸುರಿಸಿದರೆ ಅಂಥವರಿಗೆ ಸರ್ಕಾರದ ಸಮಿತಿಗಳಲ್ಲಿ ಸದಸ್ಯರಾಗುವ ಸದವಕಾಶಗಳಿವೆ’ ಎಂಬ ತಪ್ಪು ಸಂದೇಶ ರವಾನೆಯಾಗಿದೆ. ವ್ಯಕ್ತಿ
ಗಳ ತೇಜೋವಧೆ ಮಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ. ಹೀಗಾಗಿ, ರಾಜೀನಾಮೆ ಕೊಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಜಿಎಸ್ಸೆಸ್‌ ಪ್ರತಿಷ್ಠಾನಕ್ಕೂ ರಾಜೀನಾಮೆ:

ಸರ್ಕಾರ ಸ್ಥಾಪಿಸಿರುವ ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ’ದ ಅಧ್ಯಕ್ಷರಾದ ಎಸ್.ಜಿ. ಸಿದ್ದರಾಮಯ್ಯ, ಸದಸ್ಯರಾದ ಎಚ್.ಎಸ್. ರಾಘವೇಂದ್ರರಾವ್‌, ಚಂದ್ರಶೇಖರ ನಂಗಲಿ, ನಟರಾಜ ಬೂದಾಳು ಅವರೂ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರೆಲ್ಲ, ‘ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ
ಮೇಲೆ ನಡೆಯುತ್ತಿರುವ ಅಸಂವಿಧಾನಿಕ ದಬ್ಬಾಳಿಕೆಗಳನ್ನು ಕಂಡು
ಆತಂಕ ಉಂಟಾಗಿದೆ. ಕೋಮುದ್ವೇಷವನ್ನು ರಾಜಾರೋಷವಾಗಿ ಮಾತನಾಡುತ್ತಾ ಅಟಾಟೋಪ ಮೆರೆಯುತ್ತಾ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಸರ್ಕಾರ ಮೌನ ವಹಿಸಿರುವುದು ಭಯವನ್ನೂ ಹುಟ್ಟಿಸಿದೆ.
ಈ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಕ್ರಮಕ್ಕೆ ಕಸಾಪ ಆಗ್ರಹ:

ಕುವೆಂಪು ಅವರನ್ನು ನಿಂದಿಸಿ,ನಾಡಗೀತೆಯನ್ನು ತಿರುಚಿ ಬರೆದವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಜೋಶಿ, ‘ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ’ ಕವಿತೆಯನ್ನು ‘ನಾಡಗೀತೆ‘ ಮಾಡಬೇಕೆಂದು ಮೊದಲು ನಿರ್ಧರಿಸಿದ ಕಸಾಪ, 1971ರಲ್ಲಿ ಕುವೆಂಪು ಅವರ ಸಮ್ಮತಿ ಪಡೆದು ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಅದನ್ನು ಹಾಡಿಸುತ್ತಿತ್ತು. 2004ರಲ್ಲಿ ಈ ಸಂಬಂಧ ಕರ್ನಾಟಕ ಸರ್ಕಾರ ನಾಡಗೀತೆಯನ್ನಾಗಿ ನಿಗದಿಪಡಿಸಿ ಆದೇಶ ಹೊರಡಿಸಿತು.

‘ದಾರ್ಶನಿಕ ಕವಿ ಕುವೆಂ‍ಪು ಅವರನ್ನು ಅರ್ಥೈಸಿಕೊಂಡಿಲ್ಲದಿರುವವರು ಮಾತ್ರ ನಾಡಗೀತೆ ಮತ್ತು ಕುವೆಂಪು ವಿರುದ್ಧ ಟೀಕಿಸುವಂತಹ ಅಡ್ಡದಾರಿ ಹಿಡಿಯುತ್ತಾರೆ. ಇಂತಹ ವ್ಯಕ್ತಿಗಳ ನಡೆಯನ್ನು ಕಸಾಪದ ಎಲ್ಲ ಹಂತಗಳ ಘಟಕಗಳೂ ಒಕ್ಕೊರಲಿನಿಂದ ಖಂಡಿಸುತ್ತವೆ’ ಎಂದೂ ಅವರು ತಿಳಿಸಿದ್ದಾರೆ.

ಕವಿತೆ ವಾಪಸ್ ಪಡೆದ ಎಸ್‌ಜಿಎಸ್‌

ಪಠ್ಯ ಪುಸ್ತಕದಲ್ಲಿ ಬೋಧಿಸಲು ನೀಡಿದ್ದ ಅನುಮತಿಯನ್ನು ಕವಿ ಎಸ್.ಜಿ. ಸಿದ್ದರಾಮಯ್ಯ ಅವರೂ ವಾಪಸ್ ಪಡೆದಿದ್ದಾರೆ.

ಜಿ.ರಾಮಕೃಷ್ಣ ಹಾಗೂ ದೇವನೂರ ಮಹದೇವ ಅವರೂ ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರು. ಈ ಸಾಲಿಗೆ ಸೇರಿರುವ ಸಿದ್ದರಾಮಯ್ಯ ಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

‘ಮನೆಗೆಲಸದ ಹೆಣ್ಣುಮಗಳು’ ಎಂಬ ನನ್ನ ಕವಿತೆ 9ನೇ
ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿ ಸೇರಿದೆ. ಅದನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದೇನೆ‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.